ಸುಪ್ರೀಂ ಕೋರ್ಟ್‌ನ 51 ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ: ರಾಷ್ಟ್ರಪತಿ ಅಸ್ತು, ನವೆಂಬರ್ 11ಕ್ಕೆ ಪದಗ್ರಹಣ
ಸುಪ್ರೀಂ ಕೋರ್ಟ್‌ನ 51 ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ: ರಾಷ್ಟ್ರಪತಿ ಅಸ್ತು, ನವೆಂಬರ್ 11ಕ್ಕೆ ಪದಗ್ರಹಣ
ಸುಪ್ರೀಂ ಕೋರ್ಟ್‌ನ 51 ಸಿಜೆಐ ಆಗಿ ನ್ಯಾ. ಸಂಜೀವ್ ಖನ್ನಾ ಅವರು ನೇಮಕಗೊಂಡಿದ್ದಾರೆ. ಭಾರತದ ಸಂವಿಧಾನ ನೀಡಿದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿಜೆಐ ನೇಮಕಾತಿಗೆ ಅಂಕಿತ ಹಾಕಿದರು.
ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಆಗಿರುವ ನ್ಯಾ. ಧನಂಜಯ ವೈ ಚಂದ್ರಚೂಡ್ ಅವರ ಅಧಿಕಾರಾವಧಿ ನವೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಚಂದ್ರಚೂಡ್ ಅವರು ಸಂಜೀವ್ ಖನ್ನಾ ಅವರ ಹೆಸರನ್ನು ಸೂಚಿಸಿದ್ದು, ಈ ಹೆಸರಿಗೆ ಕೇಂದ್ರ ಸರ್ಕಾರವೂ ಸಮ್ಮತಿ ಸೂಚಿಸಿದೆ.
ಅವರು ಮುಂದಿನ ಏಳು ತಿಂಗಳ ಕಾಲ ಸಿಜೆಐ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಮೇ 13, 2025ರಂದು ಸಂಜೀವ್ ಖನ್ನ ಅವರು ನಿವೃತ್ತರಾಗಲಿದ್ದಾರೆ.
ಸಂಜೀವ್ ಖನ್ನ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪದನಿಮಿತ್ತ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ.
1977ರಲ್ಲಿ ನವದೆಹಲಿಯ ಮಾಡರ್ನ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಅವರು ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಕ್ಯಾಂಪಸ್ ಕಾನೂನು ಕೇಂದ್ರದಲ್ಲಿ ಕಾನೂನು ಅಧ್ಯಯನ ಮಾಡಿದ್ದರು.
ಅವರ ತಂದೆ ನ್ಯಾಯಮೂರ್ತಿ ದೇವರಾಜ್ ಖನ್ನ 1985ರಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದವರು. ತಾಯಿ ಸರೋಜ್ ಖನ್ನಾ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನ ಹಿಂದಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು.
1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಸಂಜೀವ್ ಖನ್ನಾ, 2005ರ ಜೂನ್ 24ರಂದು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನಿಯುಕ್ತರಾದರು.