'ವೈಯಕ್ತಿಕ ಸ್ವಾತಂತ್ಯ' ಧರ್ಮಗ್ರಂಥಗಳ ಆಶಯ: ಧಾರ್ಮಿಕ ಆಚರಣೆಗೆ ಒತ್ತಾಯ ತರವಲ್ಲ ಎಂದ ಹೈಕೋರ್ಟ್!
'ವೈಯಕ್ತಿಕ ಸ್ವಾತಂತ್ಯ' ಧರ್ಮಗ್ರಂಥಗಳ ಆಶಯ: ಧಾರ್ಮಿಕ ಆಚರಣೆಗೆ ಒತ್ತಾಯ ತರವಲ್ಲ ಎಂದ ಹೈಕೋರ್ಟ್!
representational image
ಸಾರ್ವಜನಿಕ ಕಾರ್ಯಕ್ರಮವೊಂದಲ್ಲಿ ಕೇರಳದ ಆರ್ಥಿಕ ತಜ್ಞ ಹಾಗೂ ಮಾಜಿ ಹಣಕಾಸು ಸಚಿವ ಟಿ.ಎಂ. ಥಾಮಸ್ ಇಸಾಕ್ ಅವರಿಗೆ ಶೇಕ್ ಹ್ಯಾಂಡ್ ಮಾಡಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿಯನ್ನು ಟೀಕಿಸಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ಕೇರಳ ಹೈಕೋರ್ಟ್ ನಿರಾಕರಿಸಿದೆ.
ಕೇರಳ ಹೈಕೋರ್ಟ್‌ನ ನ್ಯಾ. ಪಿ.ವಿ. ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಮಾಜಿ ಸಚಿವರೊಂದಿಗೆ ಹಸ್ತಲಾಘವ ಮಾಡುವ ಆಯ್ಕೆಯು ವಿದ್ಯಾರ್ಥಿನಿಯ ವೈಯಕ್ತಿಕವಾದದ್ದು. ಅವರ ಇಚ್ಚೆಗೆ ವಿರುದ್ಧವಾಗಿ ಯಾವುದೇ ಧಾರ್ಮಿಕ ಆಚರಣೆಯನ್ನು ಪಾಲಿಸುವಂತೆ ಆಕೆಯನ್ನು ಯಾರೂ ಒತ್ತಾಯಿಸಲಾಗದು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಶೇಕ್ ಹ್ಯಾಂಡ್ ಮಾಡುವ ಮೂಲಕ ಕಾನೂನು ವಿದ್ಯಾರ್ಥಿನಿ ವ್ಯಭಿಚಾರದ ವರ್ತನೆ ತೋರಿದ್ದಾರೆ. ಈ ಮೂಲಕ ಅವರು ಶರಿಯತ್ ಕಾನೂನನ್ನುಉಲ್ಲಂಘಿಸಿದ್ದಾರೆ ಎಂದು ಆರೋಪಿ ಅಬ್ದುಲ್ ನೌಶಾದ್ ಆರೋಪ ಮಾಡಿದ್ದ.
ತನಗೆ ಹಾಗೂ ತನ್ನ ಕುಟುಂಬಕ್ಕೆ ಅವಮಾನ ಮಾಡಲು ನೌಶಾದ್ ಈ ಆರೋಪ ಮಾಡಿದ್ದಾರೆ ಎಂದು ಕಾನೂನು ವಿದ್ಯಾರ್ಥಿನಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಕೇರಳ ಪೊಲೀಸರು ಈ ದೂರನ್ನು ಸ್ವೀಕರಿಸಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 153, ಪೊಲೀಸ್ ಕಾಯ್ದೆಯ ಸೆಕ್ಷನ್ 119ಎ (ಮಹಿಳೆಯರ ಘನತೆಗೆ ಚ್ಯುತಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಧರ್ಮ ಗ್ರಂಥಗಳು ವೈಯಕ್ತಿಕ ಸ್ವಾತಂತ್ಯವನ್ನು ಉತ್ತೇಜಿಸುತ್ತವೆ. ಇನ್ನೊಬ್ಬ ವ್ಯಕ್ತಿಯ ಮೇಲೆ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ಹೇರಲು ಸಾಧ್ಯವಿಲ್ಲ ಎಂದು ಪವಿತ್ರ ಕುರಾನ್‌ನ ಸಾಲುಗಳನ್ನು ನ್ಯಾಯಾಲಯ ಉಲ್ಲೇಖಿಸಿತು.
ಧರ್ಮವನ್ನು ಪ್ರಚಾರ ಮಾಡುವ ಹಕ್ಕು ಎಂದರೆ ಉಳಿದವರ ಮೇಲೆ ಧಾರ್ಮಿಕ ಆಚರಣೆಗಳನ್ನು ಹೇರುವುದು ಎಂದರ್ಥವಲ್ಲ. ಸಂವಿಧಾನದ 25ರಿಂದ 28ನೇ ವಿಧಿಯು ಒಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಅನುಮತಿಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಶಬ್ದಗಳಲ್ಲಿ ಹೇಳಿದೆ.
ಧಾರ್ಮಿಕ ನಂಬಿಕೆಗಳು ವೈಯಕ್ತಿಕವಾದದ್ದು. ಧರ್ಮದಲ್ಲಿ, ಅದರಲ್ಲೂ ವಿಶೇಷವಾಗಿ ಮುಸಲ್ಮಾನ್ ಧರ್ಮದಲ್ಲಿ ಯಾವುದೇ ಬಲವಂತದ ಹೇರಿಕೆ ಇಲ್ಲ. ಒಬ್ಬರು ಧಾರ್ಮಿಕ ಆಚರಣೆ ಪಾಲಿಸುವಂತೆ ಇನ್ನೊಬ್ಬರನ್ನು ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಅಭ್ಯಾಸ ಮಾಡಲು ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂಬುದಾಗಿ ಸಂವಿಧಾನದ 25ನೇ ವಿಧಿ ಹೇಳುತ್ತದೆ ಎಂಬುದನ್ನು ನ್ಯಾಯಪೀಠ ನೆನಪಿಸಿತು.
ಧಾರ್ಮಿಕ ಆಚರಣೆ ಈ ದೇಶದ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯಾಗಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಸಂಬಂಧಿತ ನಿಯಮಾವಳಿಗಳಿಗೆ ಒಳಪಟ್ಟು ಎಲ್ಲ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ಯಕ್ಕೆ ಪ್ರತಿಯೊಬ್ಬರು ಸಮಾನವಾಗಿ ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸದ್ರಿ ಈ ಪ್ರಕರಣದಲ್ಲಿ ಕಾನೂನು ವಿದ್ಯಾರ್ಥಿನಿ ವಿರುದ್ಧ ತಾನು ನೀಡಿದ್ದ ಹೇಳಿಕೆಗಳನ್ನು ನೌಷಾದ್ ನಿರಾಕರಿಸಿಲ್ಲ. ಹಾಗಾಗಿ, ಆತನ ಮಾಡಿದ್ದಾನೆ ಎನ್ನಲಾದ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡುವುದು ಸೂಕ್ತ ಎಂದು ನ್ಯಾಯಾಲಯ ಸೂಚಿಸಿ, ಆತನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿತು.
ಪ್ರಕರಣ: ಅಬ್ದುಲ್ ನೌಶಾದ್ Vs ಕೇರಳ ರಾಜ್ಯ ಮತ್ತಿತರರು
(ಕೇರಳ ಹೈಕೋರ್ಟ್)