-->
ಮತದಾರರ ಪಟ್ಟಿ ವ್ಯತ್ಯಾಸ ಸರಿಪಡಿಸಲು ನಕಾರ: ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ

ಮತದಾರರ ಪಟ್ಟಿ ವ್ಯತ್ಯಾಸ ಸರಿಪಡಿಸಲು ನಕಾರ: ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ

ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸ ಸರಿಪಡಿಸಲು ನಿರಾಕರಣೆ. ಸರಕಾರಿ ನೌಕರರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್





ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಶಾಖೆಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ದಿನಾಂಕ 28.10.2024 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿರುವ ವ್ಯತ್ಯಾಸವನ್ನು ಸರಿಪಡಿಸಲು ನಿರಾಕರಿಸಿದ ಕಾರಣಕ್ಕಾಗಿ ಮಾನ್ಯ ಕರ್ನಾಟಕ ಹೈಕೋರ್ಟಿನ ಧಾರವಾಡ ಪೀಠ ಚುನಾವಣೆಗೆ ತಡೆಯಾಜ್ಞೆ ನೀಡಿದೆ.



ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಕೃಷಿ ಅಧಿಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರಾದ ಸಿದ್ದರಾಮ ರೆಡ್ಡಿ, ಶ್ರೀ ಬಸವರಾಜ್, ಶಿರಸ್ತೇದಾರ್ ಹುದ್ದೆಯ ಶ್ರೀ ಮುಸ್ತಾಫ್, ಪಿಡಿಒ ಹುದ್ದೆಯ ಶ್ರೀ ಶರೀಫ್ ಸಾಬ್, ಶ್ರೀಮತಿ ರಾಣಿ ಹಳ್ಳಿ ಇವರುಗಳು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸವನ್ನು ಸರಿಪಡಿಸುವಂತೆ ಕೋರಿ ಹಲವಾರು ಮನವಿ ಸಲ್ಲಿಸಿದ್ದರೂ ತಾಲೂಕು ಶಾಖೆಯ ಸಂಬಂಧ ಪಟ್ಟ ಚುನಾವಣಾ ಅಧಿಕಾರಿಯಾಗಲೀ, ಹಂಗಾಮಿ ಪ್ರಭಾರದಲ್ಲಿರುವ ಅಧ್ಯಕ್ಷರಾಗಲೀ ಯಾವುದೇ ರೀತಿಯಲ್ಲಿ ಸ್ಪಂದಿಸದೆ ಇರುವ ಕಾರಣ ದಿನಾಂಕ 28..10.2024 ರಂದು ನಡೆಯಲಿರುವ ಚುನಾವಣೆಗೆ ತಡೆಯಾಜ್ಞೆ

ನೀಡಬೇಕೆಂದು ಕೋರಿ ಮಾನ್ಯ ಕರ್ನಾಟಕ ಹೈಕೋರ್ಟಿನ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.


ರಿಟ್ ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ನ್ಯಾಯ ಪೀಠವು ಮತದಾರರ ಪಟ್ಟಿಯಲ್ಲಿ ಮೇಲ್ನೋಟಕ್ಕೆ ಕಂಡುಬರುವ ವ್ಯತ್ಯಾಸಗಳನ್ನು ಪರಿಗಣಿಸಿ ದಿನಾಂಕ 28.10.2024 ರಂದು ಕೂಕನೂರು ತಾಲೂಕು ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ದಿನಾಂಕ 25.10.2024 ರಂದು ಹೊರಡಿಸಿದೆ.


ರಿಟ್ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರು, ಜಿಲ್ಲಾ ಸಂಘ, ಕೊಪ್ಪಳ, ತಾಲೂಕು ಸಂಘ, ಕುಕನೂರು ಮತ್ತು ಯಲಬುರ್ಗಾ ಹಾಗೂ ರಾಜ್ಯ ಮತ್ತು ತಾಲೂಕು ಚುನಾವಣಾ ಅಧಿಕಾರಿಗಳನ್ನು ಎದುರುದಾರರನ್ನಾಗಿ ಮಾಡಲಾಗಿದೆ.


ಸೂಚನಾ ಪತ್ರ ದೊರೆತ 10 ದಿನಗಳೊಳಗೆ ಹಾಜರಾಗಿ ಹೇಳಿಕೆ ನೀಡುವಂತೆ ಎದುರುದಾರರಿಗೆ ನಿರ್ದೇಶಿಸಲಾಗಿದೆ.





ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲವೆಂದು ಮತದಾನಕ್ಕೆ ಅರ್ಹರಾಗಿರುವ ಸರಕಾರಿ ನೌಕರರು ತಮಗೆ ನ್ಯಾಯ ದೊರಕಿಸುವಂತೆ ಕೋರಿ ರಾಜ್ಯಾದ್ಯಂತ ಸಿವಿಲ್ ನ್ಯಾಯಾಲಯಗಳಲ್ಲಿ ಹಾಗೂ ಮಾನ್ಯ ಹೈಕೋರ್ಟಿನ ಗುಲ್ಬರ್ಗ, ಧಾರವಾಡ ಮತ್ತು ಬೆಂಗಳೂರಿನ ಪ್ರಧಾನ ನ್ಯಾಯಪೀಠದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಾರಿ ಸಲ್ಲಿಕೆಯಾದಷ್ಟು ಚುನಾವಣಾ ದಾವೆಗಳು ಮತ್ತು ರಿಟ್ ಪ್ರಕರಣಗಳು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 100 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದ ವಿಷಯವಾಗಿದೆ.


ಸುಮಾರು ಐದೂವರೆ ಲಕ್ಷ ಸದಸ್ಯರನ್ನು ಹೊಂದಿರುವ ಬಲಾಢ್ಯ ನೌಕರ ಸಂಘಟನೆಯಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಅರ್ಹ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದಿದೆ. ಮತದಾರರ ಪಟ್ಟಿಯನ್ನು ಪ್ರಕಟಿಸದಿರುವ, ಚುನಾವಣಾ ಅಧಿಕಾರಿಯನ್ನು ನೇಮಿಸದಿರುವ ಹಲವಾರು ದೂರುಗಳು ದಾಖಲಾಗಿವೆ.


ಮತದಾರರ ಪಟ್ಟಿಯನ್ನು ಪ್ರಕಟಿಸಿದರೆ ಮಾತ್ರ ಲೋಪದೋಷ, ನ್ಯೂನತೆಗಳು ತಿಳಿದು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ದೊರೆಯುವುದು. ಚುನಾವಣಾ ನಾಮಪತ್ರ ಸಲ್ಲಿಸುವ ಆರಂಭದ ದಿನದ ವರೆಗೂ ಮತದಾರರ ಪಟ್ಟಿಯನ್ನು ಪ್ರಕಟಿಸದೇ ಇದ್ದಲ್ಲಿ ಅರ್ಹ ಮತದಾರರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ. 


ಈ ಬಾರಿ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ ಎಂಬ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ತಮಗೆ ಅನುಕೂಲವಾಗುವ ರೀತಿಯಲ್ಲಿ ಮತಕ್ಷೇತ್ರಗಳ ಬದಲಾವಣೆ ಮಾಡಿ ಕೊನೆಯ ಕ್ಷಣದವರೆಗೆ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡದೆ ದುರ್ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದ್ಯಂತ ತಾಲೂಕು ಹಾಗೂ ಜಿಲ್ಲಾ ಸಂಘದ ಮತದಾರರಿಂದ ದೂರುಗಳು ದಾಖಲಾಗಿವೆ.


ಮಾನ್ಯ ಕರ್ನಾಟಕ ಹೈಕೋರ್ಟ್ ನ ಗುಲ್ಬರ್ಗಾ ನ್ಯಾಯಪೀಠವು ಮತದಾರರ ಪಟ್ಟಿಯಿಂದ ಕೈಬಿಟ್ಟ ಅರ್ಹ ಮತದಾರರಿಗೆ ಮತದಾನ ಮಾಡುವ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿ ದಿನಾಂಕ 15.10.2024 ರಂದು ಮಧ್ಯಂತರ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.






Ads on article

Advertise in articles 1

advertising articles 2

Advertise under the article