ರಾಜ್ಯ ಪಠ್ಯಕ್ರಮದ ಬೋಧನೆ: ಮತ್ತೊಮ್ಮೆ ಸುತ್ತೋಲೆ ಹೊರಡಿಸಿದ ಶಾಲಾ ಶಿಕ್ಷಣ ಇಲಾಖೆ
ರಾಜ್ಯ ಪಠ್ಯಕ್ರಮದ ಬೋಧನೆ: ಮತ್ತೊಮ್ಮೆ ಸುತ್ತೋಲೆ ಹೊರಡಿಸಿದ ಶಾಲಾ ಶಿಕ್ಷಣ ಇಲಾಖೆ
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ರಾಜ್ಯ ಸರ್ಕಾರ ರೂಪಿಸಿದ ಪಠ್ಯಕ್ರಮವನ್ನು ಕಡ್ಡಾಯವಾಗಿ ಬೋಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ತಾಕೀತು ಮಾಡಿದೆ.
ಈ ಸಂಬಂಧವಾಗಿ, ಶಾಲಾ ಶಿಕ್ಷಣ ಇಲಾಖೆ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದ್ದು, ಅನುಮತಿ ಪಡೆದ ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮ ಹಾಗೂ ಪಠ್ಯ ಪುಸ್ತಕಗಳನ್ನೇ ಅನುಸರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದ, ಮತ್ತು ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ಶಾಲೆಗಳೂ ರಾಜ್ಯ ಪಠ್ಯಕ್ರಮವನ್ನೇ ಅನುಸರಿಸುವುದು ಕಡ್ಡಾಯ. ಇದನ್ನು ಹೊರತುಪಡಿಸಿ ಇತರ ಯಾವುದೇ ಪಠ್ಯಕ್ರಮ, ಪಠ್ಯ ಪುಸ್ತಕ ಅನುಸರಿಸುವಂತಿಲ್ಲ ಎಂದು, ಶಿಕ್ಷಣ ಇಲಾಖೆ ತಾಕೀತು ಮಾಡಿದೆ.
ಒಂದು ವೇಳೆ, ಈ ಸುತ್ತೋಲೆಯನ್ನು ಉಲ್ಲಂಘಿಸಿದರೆ, ಅಂತಹ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು, ಶಿಕ್ಷಣ ಇಲಾಖೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಕೆಲ ಶಾಲೆಗಳು ಖಾಸಗಿ ಪ್ರಕಾಶಕರಿಂದ ಪಠ್ಯಪುಸ್ತಕಗಳನ್ನು ಖರೀದಿಸುತ್ತಿವೆ. ಕೇಂದ್ರ ಪಠ್ಯಕ್ರಮವನ್ನು ಬೋಧಿಸುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.
ಎಲ್ಲ ಶಾಲೆಗಳು 1ರಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳ ಮಾಹಿತಿಯನ್ನು ಕಡ್ಡಾಯವಾಗಿ ಎಸ್‌ಎಟಿಎಸ್ ತಂತ್ರಾಂಶದಲ್ಲಿ ದಾಖಲು ಮಾಡಬೇಕು. ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಬೇಡಿಕೆ ಸಲ್ಲಿಸಿ ಪಠ್ಯಪುಸ್ತಕ ಖರೀದಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.