ಕೋರ್ಟ್ ವೆಬ್‌ಸೈಟ್‌ನಲ್ಲಿ ತದ್ವಿರುದ್ಧ ತೀರ್ಪು ಪ್ರಕಟ: ತನಿಖೆಗೆ ಹೈಕೋರ್ಟ್ ಆದೇಶ
ಕೋರ್ಟ್ ವೆಬ್‌ಸೈಟ್‌ನಲ್ಲಿ ತದ್ವಿರುದ್ಧ ತೀರ್ಪು ಪ್ರಕಟ: ತನಿಖೆಗೆ ಹೈಕೋರ್ಟ್ ಆದೇಶ
ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಮಾನಹಾನಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎರಡು ತದ್ವಿರುದ್ಧ ತೀರ್ಪುಗಳು ಪ್ರಕಟವಾಗಿರುವುದು ಉತ್ತರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಒಂದು ಆದೇಶದಲ್ಲಿ ನ್ಯಾಯಾಧೀಶರ ಸಹಿ ಇದೆ. ಮತ್ತೊಂದರಲ್ಲಿ ಸಹಿ ಇರಲಿಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಈ ತದ್ವಿರುದ್ಧ ತೀರ್ಪು ಪ್ರಕಟವಾಗಿದೆ.
ಈ ಬಗ್ಗೆ ಪರೂಲ್ ಅಗರ್ವಾಲ್ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ನ್ಯಾ. ಸೌರಭ್ ಶ್ಯಾಮ್ ಸಂಶೇರಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು ಮ್ಯಾಜಿಸ್ಟ್ರೇಟ್ ಅವರ ನಡತೆಗೆ ಸಂಬಂಧಿಸಿದಂತೆ ಅವರು ಹೆಚ್ಚು ಜಾಗರೂಕರಾಗಿರಲಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿತು.
ತದ್ವಿರುದ್ದ ಆದೇಶ ಅಪ್‌ಲೋಡ್ ಮಾಡಲಾಗಿದ್ದರೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಇದುವರೆಗೆ ಯಾವುದೇ ತನಿಖೆ ನಡೆಸಿಲ್ಲ. ಇವರು ಯುವ ಮ್ಯಾಜಿಸ್ಟ್ರೇಟ್ ಎಂದು ಹೈಕೋರ್ಟ್‌ಗೆ ಮಾಹಿತಿ ಇದೆ. ಅವರ ವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ವ್ಯತಿರಿಕ್ತ ಆದೇಶವನ್ನು ನಾನು ನೀಡುತ್ತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸಹಿ ಮಾಡದ ಆದೇಶದ ಪ್ರತಿಯಲ್ಲಿ ಮಾನಹಾನಿ ದೂರನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಸಹಿ ಮಾಡಿದ ಆದೇಶದಲ್ಲಿ ಪ್ರತಿವಾದಿಗಳಿಗೆ ಐಪಿಸಿ ಸೆಕ್ಷನ್ 500ರ ಅನ್ವಯ ಸಮನ್ಸ್ ಜಾರಿಗೊಳಿಸಲಾಘಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.