ರೂ. 300 ಲಂಚಕ್ಕೆ ಸೇವೆಯಿಂದಲೇ ಡಿಸ್ಮಿಸ್: ಸರ್ಕಾರದ ಕ್ರಮ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ರೂ. 300 ಲಂಚಕ್ಕೆ ಸೇವೆಯಿಂದಲೇ ಡಿಸ್ಮಿಸ್: ಸರ್ಕಾರದ ಕ್ರಮ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಸರ್ಕಾರಿ ನೌಕರರೊಬ್ಬರು ರೂ. 300/- ಲಂಚ ಪಡೆದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದಲೇ ಡಿಸ್ಮಿಸ್ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಮಹಿಳಾ ಟೈಪಿಸ್ಟ್ ಕಾಂತಿ ಎಂಬವರು ಲಂಚ ಪಡೆದುಕೊಂಡಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಇಲಾಖೆಯ ಆದೇಶವನ್ನು ಪ್ರಶ್ನಿಸಿ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಸರ್ಕಾರದ ಆದೇಶವನ್ನು ಮಾರ್ಪಾಟು ಮಾಡಿತ್ತು. ವಜಾ ಆದೇಶವನ್ನು ರದ್ದು ಮಾಡಿ ಕಡ್ಡಾಯ ನಿವೃತ್ತಿಯ ಆದೇಶವನ್ನು ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ, ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ. ಪಂಡಿತ್ ಮತ್ತು ನ್ಯಾ. ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ಆದೇಶ ಸರಿಯಾಗಿದೆ ಎಂದು ಹೇಳಿದ್ದು, ಅರ್ಜಿಯನ್ನು ವಜಾ ಆದೇಶವನ್ನು ಪುರಸ್ಕರಿಸಿದೆ.
ಇದು ಸಾಮಾಜಿಕ ನೈತಿಕತೆಯ ಪ್ರಶ್ನೆ. ಈ ರೀತಿ ಸರ್ಕಾರಿ ಸೇವಕರು ಲಂಚಕ್ಕೆ ಅಪೇಕ್ಷಿಸುವುದು ಗಂಭೀರ ವಿಚಾರ ಎಂಬುದಾಗಿ ನ್ಯಾಯಮಂಡಳಿ ಅಭಿಪ್ರಾಯಪಟ್ಟಿತ್ತು. ಆದರೂ ಇಲಾಖಾ ವಿಚಾರಣೆಯಲ್ಲಿ ಲಂಚ ಪಡೆದಿರುವ ಅಂಶವನ್ನು ಪರಿಗಣಿಸದೆ ನ್ಯಾಯಮಂಡಳಿ ಅರ್ಜಿದಾರರ ಶಿಕ್ಷೆಯನ್ನು ಮಾರ್ಪಾಟು ಮಾಡಿದೆ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿದೆ. ವಜಾ ಆದೇಶವನ್ನು ಬದಲಾಯಿಸಿ ಕಡ್ಡಾಯ ನಿವೃತ್ತಿ ಮಾಡಲು ಆದೇಶ ಮಾಡಲಾಗಿದೆ. ಈ ರೀತಿ ಮಾಡಲು ಅವಕಾಶ ಇಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶವೊಂದರಲ್ಲಿ ನ್ಯಾಯಪೀಠವು ಶಿಸ್ತು ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರವು ವಿಧಿಸುವ ಶಿಕ್ಷೆಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ ಎಂಬ ಅಂಶ ಗೊತ್ತಿದ್ದಲ್ಲಿ ಮಾತ್ರ ಶಿಕ್ಷೆಯ ಪ್ರಮಾಣವನ್ನು ಬದಲಾವಣೆ ಮಾಡಬಹುದು. ಆದರೆ, ಸದ್ರಿ ಪ್ರಕರಣದಲ್ಲಿ ಲಂಚ ಸ್ವೀಕರಿಸಿದವರನ್ನು ವಜಾಗೊಳಿಸಿರುವ ಸರ್ಕಾರದ ಆದೇಶ ಹೇಗೆ ಸಮಂಜಸವಲ್ಲ ಎಂಬುದಕ್ಕೆ ನ್ಯಾಯಮಂಡಳಿ ಯಾವುದೇ ಸಮರ್ಪಕ ಕಾರಣ ನೀಡಿಲ್ಲ ಎಂಬುದಾಗಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ:
ದೂರುದಾರರಾದ ಗಣೇಶ್ ಶೆಟ್ಟಿ ಎಂಬವರಿಂದ ವಾಣಿಜ್ಯ ತೆರಿಗೆ ಅಧಿಕಾರಿಯಾಗಿರುವ ಎಸ್. ಸಂಪತ್ ರಾವ್ ಬೊಮ್ಮಣ್ಣವರ್ ರೂ. 2000/- ಮತ್ತು ಟೈಪಿಸ್ಟ್ ರೂ. 300/- ಲಂಚ ಪಡೆದುಕೊಂಡಿದ್ದರು.
ಈ ಸಂಬಂಧ ಇಲಾಖೆ ವಿಚಾರಣೆಯ ನಂತರ ಟೈಪಿಸ್ಟ್ ಕಾಂತಿ ಅವರು ಕರ್ತವ್ಯ ನಿಷ್ಠೆ ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ತೀರ್ಮಾನಿಸಿತ್ತು. ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು 1966 ಇದರ ನಿಯಮ 3 ಮತ್ತು 16 ರ ಅಡಿಯಲ್ಲಿ ದುರ್ನಡತೆ ತೋರಿದ್ದಾರೆ ಎಂದು ಅಭಿಪ್ರಾಯಪಟ್ಟು ಕಾಂತಿ ಅವರನ್ನು ಸೇವೆಯಿಂದ ವಜಾಗೊಳಿಸಲಾಯಿತು.
ಈ ಆದೇಶವನ್ನು ಪ್ರಶ್ನಿಸಿ ಕಾಂತಿ ಕೆಎಟಿ ಮೊರೆ ಹೋಗಿದ್ದರು. ಕಾಂತಿ ಅವರು 11 ವರ್ಷ 5 ತಿಂಗಳು ಸೇವೆ ಸಲ್ಲಿಸಿದ್ದಾರೆ. ಇದನ್ನು ಪರಿಗಣಿಸಿ ಕೆಎಟಿ ಆದೇಶವನ್ನು ಮಾರ್ಪಾಟು ಮಾಡಿತ್ತು. ವಜಾ ಆದೇಶವನ್ನು ರದ್ದುಪಡಿಸಿ ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ಮೊರೆ ಹೋಗಿತ್ತು.