ಪೊಲೀಸ್ ಠಾಣೆಯೊಳಗೆ ಸಂಭಾಷಣೆ ರೆಕಾರ್ಡ್ ಮಾಡುವುದು ಅಪರಾಧವಲ್ಲ: ಹೈಕೋರ್ಟ್
ಪೊಲೀಸ್ ಠಾಣೆಯೊಳಗೆ ಸಂಭಾಷಣೆ ರೆಕಾರ್ಡ್ ಮಾಡುವುದು ಅಪರಾಧವಲ್ಲ: ಹೈಕೋರ್ಟ್
ಪೊಲೀಸ್ ಠಾಣೆಯೊಳಗೆ ಸಂಭಾಷಣೆ ರೆಕಾರ್ಡ್ ಮಾಡುವುದು ಅಧಿಕೃತ ರಹಸ್ಯ ಕಾಯ್ದೆಯಡಿ ಯಾವುದೇ ಅಪರಾಧ ಕೃತ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ನ್ಯಾ. ವಿಭಾ ಕಂಕಣವಾಡಿ ಮತ್ತು ಎಸ್. ಜಿ. ಚಾಪಲ್ ಗಾಂವ್ಕರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಮಹಾರಾಷ್ಟ್ರದ ಪತರ್ಡಿ ಗ್ರಾಮದ ಸುಭಾಷ್ ರಾಮಭಾವು ಅಠಾರೆ ಸಹೋದರರು ಪೊಲೀಸ್ ಠಾಣೆಯಲ್ಲಿ ತಮಗೆ ಬೆದರಿಕೆಹಾಕಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಅವರ ಈ ಕೃತ್ಯಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪೊಲೀಸರು ಸುಭಾಷ್ ರಾಮಭಾವು ಅಠಾರೆ ಮತ್ತವರ ಸಹೋದರನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ರದ್ದು ಕೋರಿ ಈ ಇಬ್ಬರು ಸಹೋದರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಪೀಠ, ಪ್ರಕರಣವನ್ನು ರದ್ದುಗೊಳಿಸಿದ್ದು, ಸಹೋದರರ ವಿರುದ್ಧ ಹೊರಿಸಲಾಗಿದ್ದ ಗೂಢಚರ್ಯದ ಆರೋಪವನ್ನು ರದ್ದುಗೊಳಿಸಿತು.
ಅಧಿಕೃತ ರಹಸ್ಯ ಕಾಯ್ದೆ 1923 ಇದರ ಕಲಂ 2 ಉಪ ಕಲಂ 8ರ ಪ್ರಕಾರ ಪೊಲೀಸ್ ಠಾಣೆ ನಿಷೇಧಿತ ಸ್ಥಳವಲ್ಲ. ಅದೇ ಕಾಯ್ದೆಯ ಸೆಕ್ಷನ್ 3 ಗೂಢಚಾರಿಕೆಗೆ ದಂಡ ವಿಧಿಸುತ್ತದೆ. ಆದರೂ, ಪೊಲೀಸ್ ಠಾಣೆಯಲ್ಲಿ ಮಾಡುವ ಎಲ್ಲವನ್ನೂ ಈ ಸೆಕ್ಷನ್‌ನಡಿ ಸಂಪೂರ್ಣವಾಗಿ ಸೇರಿಸಿಲ್ಲ. ಹಾಗಾಗಿ, ಈ ಸೆಕ್ಷನ್ ನಲ್ಲಿ ಹೇಳಲಾದ ಅಂಶಗಳು ಅನ್ವಯವಾಗದು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ಸುಭಾಷ್ ರಾಮಭಾವು ಅಠಾರೆ Vs ಮಹಾರಾಷ್ಟ್ರ ಸರ್ಕಾರ (ಬಾಂಬೆ ಹೈಕೋರ್ಟ್)