-->
ನ್ಯಾಯಾಲಯದ ಆದೇಶ  ಉಲ್ಲಂಘನೆಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ- ಮಂಗಳೂರಿನ ಸಿವಿಲ್ ನ್ಯಾಯಾಲಯದ ಮಹತ್ವದ ಆದೇಶ

ನ್ಯಾಯಾಲಯದ ಆದೇಶ ಉಲ್ಲಂಘನೆಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ- ಮಂಗಳೂರಿನ ಸಿವಿಲ್ ನ್ಯಾಯಾಲಯದ ಮಹತ್ವದ ಆದೇಶ

ನ್ಯಾಯಾಲಯದ ಆದೇಶ  ಉಲ್ಲಂಘನೆಗೆ 90 ದಿನಗಳ ಕಾರಾಗೃಹ ವಾಸದ ಶಿಕ್ಷೆ- ಮಂಗಳೂರಿನ ಸಿವಿಲ್ ನ್ಯಾಯಾಲಯದ ಮಹತ್ವದ ಆದೇಶ



ನ್ಯಾಯಾಲಯವು ಹೊರಡಿಸಿದ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ನಡೆಸಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಸಿವಿಲ್  ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ತಪ್ಪಿತಸ್ಥ ವ್ಯಕ್ತಿಗೆ 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


 ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಶ್ರೀ ವಿಠೋಬ ರುಕುಮಾಯಿ ದೇವರ ಭಂಡಾರದ  ದಿನನಿತ್ಯದ ಆಡಳಿತಾತ್ಮಕ ವ್ಯವಹಾರದಲ್ಲಿ ಹಸ್ತಕ್ಷೇಪ ಉಂಟುಮಾಡಬಾರದು ಹಾಗೂ ಟ್ರಸ್ಟಿ ಎಂದು ತನ್ನನ್ನು ತಾನು ಪ್ರತಿಪಾದಿಸಬಾರದು  ಎಂದು ಹನುಮಂತ ಕಾಮತ್ ಎಂಬವರ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ದೇವರ ಭಂಡಾರದ  ಟ್ರಸ್ಟಿ  ಎಂ ವರದಾಯ ಪ್ರಭು ಅವರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಹನುಮಂತ ಕಾಮತ್ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಹೊರಡಿಸಿತ್ತು.


ಸದರಿ ಆದೇಶದ ವಿರುದ್ಧ ಹನುಮಂತ ಕಾಮತ್ ಅವರು ಸಲ್ಲಿಸಿದ ಮೇಲ್ಮನವಿ ತಿರಸ್ಕೃತವಾಗಿತ್ತು. ತದನಂತರ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಯಾವುದೇ ತಡೆಯಾಜ್ಞೆಯನ್ನು ಹೈಕೋರ್ಟ್ ನೀಡಿಲ್ಲ. ಆದರೆ  ಹನುಮಂತ ಕಾಮತ್ ಅವರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಾನೇ ಭಂಡಾರದ ಟ್ರಸ್ಟಿ ಎಂದು ಘೋಷಣೆ ಮಾಡಿಕೊಂಡು ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುತ್ತಿದ್ದರು. ದಿನಾಂಕ 30.03.2018 ರಂದು ತುಳುನಾಡು ಸುದ್ದಿ ಪತ್ರಿಕೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ತಾನೇ ಬಂಡಾರದ ಟ್ರಸ್ಟಿ ಎಂದು ಹೇಳಿಕೊಂಡಿದ್ದರು. 


ಹನುಮಂತ ಕಾಮತ್ ಅವರು ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಸುತ್ತಿದ್ದಾರೆ ಎಂದು ಆರೋಪಿಸಿ  ಅವರನ್ನು  ಸಿವಿಲ್ ಬಂಧೀಖಾನೆಯಲ್ಲಿ ನಿರೋಧಿಸಿಡಬೇಕೆಂದು ಎಂದು ಕೋರಿ ಎಂ ವರದಾಯ ಪ್ರಭು ಅವರು ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿದ್ದರು.


ವಿಚಾರಣೆ ನಡೆಸಿದ ನ್ಯಾಯಾಲಯವು ಹನುಮಂತ ಕಾಮತ್ ಅವರು ಉದ್ದೇಶಪೂರ್ವಕವಾಗಿ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ ಎಂಬ ನಿಷ್ಕರ್ಷೆಗೆ ಬಂದು ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿತು. ತತ್ಪರಿಣಾಮವಾಗಿ ಹನುಮಂತ ಕಾಮತ್ ಅವರು 90 ದಿನಗಳ ವರೆಗೆ ಸಿವಿಲ್ ಬಂಧೀಖಾನೆಗೆ ಒಳಪಡಲು ಬಾಧ್ಯಸ್ತರಾಗಿರುತ್ತಾರೆ ಎಂಬ ಆದೇಶವನ್ನು ದಿನಾಂಕ 23.11.2024 ರಂದು ಹೊರಡಿಸಿತು.


ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು  ಪರಿಹಾರದ ಎಲ್ಲಾ ಬಾಗಿಲು ಮುಚ್ಚಿದ ನಂತರ ಅಂತಿಮವಾಗಿ ನ್ಯಾಯಾಲಯದ ಮುಂದೆ ತನ್ನ ಅಹವಾಲನ್ನು ಹೇಳಿಕೊಂಡು ಬರುತ್ತಾರೆ. ನ್ಯಾಯಾಲಯವು ಅಂತಹ ವ್ಯಕ್ತಿಯ ಅಹವಾಲನ್ನು ಆಲಿಸಿ ಒಂದು ನಿರ್ದಿಷ್ಟವಾದ ಆದೇಶವನ್ನು ಹೊರಡಿಸಿದಾಗ ಅಂತಹ ಆದೇಶವನ್ನು ಪಾಲಿಸುವ ಬದ್ಧತೆ ಸದರಿ ಆದೇಶ ಯಾವ ವ್ಯಕ್ತಿಯ ವಿರುದ್ಧ ಹೊರಡಿಸಲಾಗಿದೆಯೋ ಆ ವ್ಯಕ್ತಿಗೆ ಇರುತ್ತದೆ.  ಆದರೆ ತನ್ನ ವಿರುದ್ಧ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ಪುನಃ ಅದೇ ರೀತಿಯ ನಡವಳಿಕೆಯಿಂದ ನಡೆದುಕೊಂಡರೆ ನ್ಯಾಯಾಲಯದ ಆದೇಶಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಆದುದರಿಂದ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೋಳ್ಬಲವನ್ನು ಹೊಂದಿರುವ ವ್ಯಕ್ತಿಗಳಿಗೆ ಸಮಾಜವನ್ನು ನಿಯಂತ್ರಿಸುವ ಸಂದರ್ಭ ಸೃಷ್ಟಿಯಾಗುತ್ತದೆ. ಅಂತಹ ಕೃತ್ಯಕ್ಕೆ ಕಡಿವಾಣ ಹಾಕದೆ ಇದ್ದಲ್ಲಿ ಸಮಾಜದಲ್ಲಿ ಇರುವಂತಹ ಕಾನೂನಿನ ವ್ಯವಸ್ಥೆ ಮತ್ತು ನೀತಿ ನಿಯಮಗಳನ್ನು ಗಾಳಿಗೆ ತೂರಿದ ವ್ಯಕ್ತಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿತು. 


ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಪಿ. ರಂಜನ್ ರಾವ್ ವಾದಿಸಿದರು.

Ads on article

Advertise in articles 1

advertising articles 2

Advertise under the article