ಕೋರ್ಟ್ ಆದೇಶ ಜಾರಿ ತಪ್ಪಿಸಲು ಚುನಾವಣಾಧಿಕಾರಿಯಿಂದ ರಜೆಯ 'ನಾಟಕ': ರಂಗೋಲಿ ಕೆಳಗೆ ತೂರಿದವರಿಗೆ ಕೋರ್ಟ್ ಖಡಕ್ ಪ್ರತ್ಯುತ್ತರ
ಕೋರ್ಟ್ ಆದೇಶ ಜಾರಿ ತಪ್ಪಿಸಲು ಚುನಾವಣಾಧಿಕಾರಿಯಿಂದ ರಜೆಯ 'ನಾಟಕ': ರಂಗೋಲಿ ಕೆಳಗೆ ತೂರಿದವರಿಗೆ ಕೋರ್ಟ್ ಖಡಕ್ ಪ್ರತ್ಯುತ್ತರ
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆಯ ಪ್ರಕ್ರಿಯೆ ಈಗ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡದೆ ನಿರಂಕುಶ ಆಡಳಿತಕ್ಕೆ ಚುನಾವಣಾಧಿಕಾರಿ ಮೊರೆ ಹೋಗಿರುವುದು ಎದ್ದುಕಾಣುವಂತಿದೆ.
ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ದಿನಾಂಕ 11-11-2024ರಂದು ನೀಡಿದ ಆದೇಶವನ್ನು ಜಾರಿಗೊಳಿಸಲು ತಾನು ಸುತಾರಾಂ ಸಿದ್ದನಿಲ್ಲ ಎಂದು ಚುನಾವಣಾಧಿಕಾರಿ ಸಾರುವಂತಿದೆ.
ಇದಕ್ಕೆ ಸಾಕ್ಷಿ ಎಂಬಂತೆ, ಕೋರ್ಟ್ ಆದೇಶವನ್ನು ತಮಗೆ ಜಾರಿಗೊಳ್ಳುವುದನ್ನು ತಪ್ಪಿಸಲು ಚುನಾವಣಾಧಿಕಾರಿಯಿಂದ ರಜೆಯ (ಕಪಟ?) 'ನಾಟಕ' ವಾಡಿದ್ದಾರೆ. ಕೋರ್ಟ್ ಆದೇಶ ಜಾರಿಯೇ ಆಗದಿದ್ದರೆ ಅದರ ಪಾಲನೆ ಹೇಗೆ ಸಾಧ್ಯ ಎಂಬ ಸಬೂಬು ಕೊಡಲು ಚುನಾವಣಾಧಿಕಾರಿ ಈ ನಾಟಕವಾಡಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಸದಸ್ಯರು ಆಡಿಕೊಳ್ಳತೊಡಗಿದ್ದಾರೆ.
ಆದರೆ, ಇದಕ್ಕೆ ನ್ಯಾಯಾಲಯ ಬೇರೆಯೇ ದಾರಿ ತೋರಿಸಿದೆ. "ರಂಗೋಲಿ ಕೆಳಗೆ ತೂರಿದವರಿಗೆ" ಕೋರ್ಟ್ ಖಡಕ್ ಪ್ರತ್ಯುತ್ತರ ನೀಡಿದೆ. ವಾಟ್ಸ್ಯಾಪ್, ಇಮೇಲ್ ಮತ್ತು ಆದೇಶವನ್ನು ಸಂಘದ ಕಚೇರಿಗೆ ಬಾಗಿಲಿಗೆ ಅಂಟಿಸುವ (ಅಫಿಕ್ಸ್ಚರ್) ಮೂಲಕ ಆದೇಶ ಜಾರಿಗೆ ಸೂಚನೆ ನೀಡಿದೆ. ಇದಕ್ಕೆ ಪೊಲೀಸರ ಸಮ್ಮುಖದಲ್ಲಿ ಅವರ ಸಹಕಾರವನ್ನು ಪಡೆದು ಕೋರ್ಟ್ ಆದೇಶ ಜಾರಿಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ದಿನಾಂಕ 11-11-2024ರಂದು ಕೋರ್ಟ್ ನೀಡಿದ ಆದೇಶವೇನು..?
ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರ ಸ್ಪರ್ಧೆಗೆ ಮತ್ತು ಮತದಾನಕ್ಕೆ ಅವಕಾಶ ನೀಡಬೇಕು ಎಂದು ಮಂಗಳೂರು ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶವಿದ್ದರೂ ಅದನ್ನು ಕಡೆಗಣಿಸಿ ಪ್ರಕಾಶ್ ನಾಯಕ್ ಅವರ ನಾಮಪತ್ರವನ್ನು ಕ್ರಮಬದ್ಧ ಎಂದು ಸ್ವೀಕರಿಸಲಾಗಿದ್ದರೂ, ನ್ಯಾಯಾಲಯ ವಿಮರ್ಶೆ ಮಾಡಿದ ಅಂಶವನ್ನೇ ಮುಂದಿಟ್ಟು ನಾಮಪತ್ರವನ್ನು ಚುನಾವಣಾಧಿಕಾರಿಯವರು ತಿರಸ್ಕರಿಸಿದ್ದರು.
ಸದರಿ ನಿಯಮಗಳಿಗೆ ಸಂಬಂಧಪಟ್ಟ ಕಾರಣಗಳನ್ನು ಈಗಾಗಲೇ ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ಚರ್ಚಿಸಿ ಅರ್ಜಿದಾರರ ಸದಸ್ಯತ್ವವನ್ನು ಅಮಾನತುಗೊಳಿಸಿರುವ ಆದೇಶ ನಿರಂಕುಶವಾದ ಆದೇಶವಾಗಿರುತ್ತದೆ ಎಂದು ನ್ಯಾಯಾಲಯ ಈಗಾಗಲೇ ಅವಲೋಕವನ್ನು ಮಾಡಿತ್ತು.
ಪುನಃ ಅದೇ ನಿಯಮದಡಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಚುನಾವಣಾಧಿಕಾರಿಯು ಅದೇ ಕಾರಣ ನೀಡಿ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ನ್ಯಾಯಾಲಯ ಆದೇಶ ನೀಡಿದ ಹೊರತಾಗಿಯೂ ಚುನಾವಣಾಧಿಕಾರಿ ಈ ಆದೇಶವನ್ನು ಗಾಳಿಗೆ ತೂರಿದ್ದು ನ್ಯಾಯಾಂಗ ನಿಂದನೆಯಾಗಿದೆ ಎಂದು ಆದೇಶದಲ್ಲಿ ಹೇಳಿತ್ತು.
ಚುನಾವಣಾಧಿಕಾರಿ ಒಬ್ಬ ಸಾರ್ವಜನಿಕ ಅಧಿಕಾರಿಯಾಗಿದ್ದು, ಒಂದು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಅವರೇ ಕೋರ್ಟ್ ಆದೇಶ ಪಾಲಿಸದಿದ್ದರೆ, ಇನ್ನು ಸಾರ್ವಜನಿಕ ಸೇವೆಯನ್ನು ಹೇಗೆ ಮಾಡುತ್ತಾರೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು.
ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಗಾಳಿಗೆ ತೂರಿ ಅರ್ಜಿದಾರರ ನಾಮಪತ್ರವನ್ನು ತಿರಸ್ಕರಿಸಿರುವ ಚುನಾವಣಾಧಿಕಾರಿಯ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.
ಅರ್ಜಿದಾರರ ನಾಮಪತ್ರವನ್ನು ಪರಿಗಣಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಆದೇಶ ಹೊರಡಿಸಿರುವ ನ್ಯಾಯಾಲಯ, ಈ ಆದೇಶಕ್ಕೆ ತಪ್ಪಿದ್ದಲ್ಲಿ ಚುನಾವಣಾಧಿಕಾರಿಯು ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: