ಕರಾವಳಿ, ಮಲೆನಾಡು ಭಾಗಗಳಲ್ಲಿ ಇ-ಖಾತಾ ವಿತರಣೆಯಲ್ಲಿ ಸಮಸ್ಯೆ: ಸಮಗ್ರ ಪರಿಹಾರಕ್ಕೆ ಜಂಟಿ ಕಾರ್ಯಪಡೆ ರಚನೆ
ಕರಾವಳಿ, ಮಲೆನಾಡು ಭಾಗಗಳಲ್ಲಿ ಇ-ಖಾತಾ ವಿತರಣೆಯಲ್ಲಿ ಸಮಸ್ಯೆ: ಸಮಗ್ರ ಪರಿಹಾರಕ್ಕೆ ಜಂಟಿ ಕಾರ್ಯಪಡೆ ರಚನೆ
ರಾಜ್ಯದಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇ-ಆಸ್ತಿ, ಇ-ವಿನ್ಯಾಸ ಮತ್ತು ಇ-ಸ್ವತ್ತು ವಿತರಣೆಯಲ್ಲಿ ಆಗಿರುವ ಸಮಸ್ಯೆಗಳ ಪರಿಹಾರಕ್ಕೆ ಜಂಟಿ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ.
ಈ ಜಂಟಿ ಕಾರ್ಯಪಡೆಯು ಸರ್ಕಾರದ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿದೆ
ಆಸ್ತಿಗಳ ಖಾತೆ ಹಾಗೂ ನಕ್ಷೆಗಳ ಮಂಜೂರಾತಿಗೆ ಸಂಬಂಧಿಸಿದ ತೊಡಕುಗಳ ನಿವಾರಣೆಗೆ ಕಂದಾಯ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಪೌರಾಡಳಿತ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಈ ಸಚಿವಾಲಯದ ಮೂವರು ಸಚಿವರ ಸಮ್ಮುಖದಲ್ಲಿ ಜಂಟಿ ಕಾರ್ಯಪಡೆ ರಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.
ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಠಾಣಾ ವ್ಯಾಪ್ತಿಯ ವಿಸ್ತರಣೆ ಕುರಿತೂ ಅಧ್ಯಯನ ನಡೆಸಿ ಶಿಫಾರಸು ಸಲ್ಲಿಸಲು ಕಾರ್ಯಪಡೆಗೆ ನಿರ್ದೇಶನ ನೀಡಲು ತೀರ್ಮಾನಿಸಲಾಗಿದೆ.
ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಗಳ ವ್ಯಾಪ್ತಿಯಲ್ಲಿ ಖಾತೆ ಹೊಂದಿರದ ವಸತಿ ಹಾಗೂ ವಾಣಿಜ್ಯ ಆಸ್ತಿಗಳಿಗೆ ಬಿಬಿಎಂಪಿ ಮಾದರಿಯಲ್ಲಿ ಖಾತಾ ನೀಡುವ ವ್ಯವಸ್ಥೆ ಜಾರಿಗೆ ತರಲು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕರ್ನಾಟಕ ಗೃಹ ಮಂಡಳಿ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳೂ ಇ-ಆಸ್ತಿ ವ್ಯಾಪ್ತಿಗೆ ಬರಲಿದ್ದು, ಈ ಬಗ್ಗೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ಧಾರೆ.
ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳನ್ನು ಇ-ಆಸ್ತಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಆಸ್ತಿಗಳ ವಿಸ್ತೀರ್ಣದ ಮಾಹಿತಿ ಇಲ್ಲದ ಪ್ರಕರಣಗಳಲ್ಲಿ ಅಳತೆ ನಮೂದಿಸಲು ಅವಕಾಶ ಕಲ್ಪಿಸಲು ಎನ್‌ಐಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹಕ್ಕು ಬಿಡುಗಡೆ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಡೆವೆಲಪರ್‌ಗಳ ಹೆಸರಿಗೆ ನಿವೇಶನ ಖಾತೆ ಮಾಡಿಕೊಡುವ ಸಂಬಂಧ ಸುತ್ತೋಲೆಯನ್ನು ಹೊರಡಿಸಲಾಗುವುದು. ಅಭಿವೃದ್ಧಿ ಹಕ್ಕುಗಳ ವರ್ಗಾವಣೆ(ಟಿಡಿಆರ್) ಸಂಬಂಧಿಸಿದ ವಹಿವಾಟುಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಟಿಡಿಆರ್‌ಗಳನ್ನೂ ಇ-ಆಸ್ತಿ, ಇ-ಸ್ವತ್ತು ವ್ಯಾಪ್ತಿಗೆ ತಂದು, ಪ್ರತ್ಯೇಕ ಆಸ್ತಿ ಗುರುತಿನ ಸಂಖ್ಯೆ(ಪಿಐಡಿ) ನೀಡುವ ಮಹತ್ವದ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಎಲ್ಲ ಆಸ್ತಿಗಳಿಗೂ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಈಗ ಇರುವ ಪ್ರಕ್ರಿಯೆಯಲ್ಲಿ ಇರುವ ಲೋಪವನ್ನು ಸರಿಪಡಿಸಲಾಗುವುದು, ಇ-ಖಾತಾ ಕಡ್ಡಾಯವಾಗಿರುವುದರಿಂದ ನಕಲಿ ಖಾತೆಗಳನ್ನು ಸೃಷ್ಟಿಸಿ ಅಕ್ರಮ ಎಸಗುವುದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.