ಉಗ್ರನ ವಿಚಾರಣೆಗೆ ಜೈಲಿನಲ್ಲೇ ಸ್ಪೆಷಲ್ ಕೋರ್ಟ್; ನ್ಯಾಯಯುತ ವಿಚಾರಣೆ ಎದುರಿಸಲು ಎಲ್ಲರಿಗೂ ಅವಕಾಶ- ಸುಪ್ರೀಂ ಕೋರ್ಟ್
ಉಗ್ರನ ವಿಚಾರಣೆಗೆ ಜೈಲಿನಲ್ಲೇ ಸ್ಪೆಷಲ್ ಕೋರ್ಟ್; ನ್ಯಾಯಯುತ ವಿಚಾರಣೆ ಎದುರಿಸಲು ಎಲ್ಲರಿಗೂ ಅವಕಾಶ- ಸುಪ್ರೀಂ ಕೋರ್ಟ್
ಉಗ್ರ ಅಜ್ಮಲ್ ಕಸಬ್‌ನಂತವರಿಗೂ ಭಾರತದಲ್ಲಿ ನ್ಯಾಯಯುತ ವಿಚಾರಣೆ ಎದುರಿಸುವ ಅವಕಾಶ ಕಲ್ಪಿಸಲಾಗಿದೆ. ಪಕ್ಷಕಾರರಾದ ಎಲ್ಲರಿಗೂ ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ಅಭಯ ಶ್ರೀನಿವಾಸ ಓಕ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅಪಹರಣ ಪ್ರಕರಣದಲ್ಲಿ ಉಗ್ರ, ಜೆಕೆಎಲ್‌ಎಫ್ ಮುಖ್ಯಸ್ಥ ಯಾಸೀನ್ ಮಲಿಕ್‌ನನ್ನು ವಿಚಾರಣೆ ನಡೆಸಲು ಜೈಲಿನಲ್ಲೇ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ.
ಮುಫ್ತಿ ಮಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅಪಹರಣ ಪ್ರಕರಣದ ಆರೋಪಿ ಜೆಕೆಎಲ್‌ಎಫ್‌ನ ಮುಖ್ಯಸ್ಥ ಯಾಶೀನ್ ಮಲಿಕ್‌ನನ್ನು ಹಾಜರುಪಡಿಸಬೇಕು ಎಂದು ಸಿಬಿಐಗೆ ನಿರ್ದೇಶನ ನೀಡಿ ಜಮ್ಮು ಕಾಶ್ಮೀರದ ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಈ ಆದೇಶ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಎಲ್ಲರಿಗೂ ನ್ಯಾಯಯುತ ವಿಚಾರಣೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದೆ.
ಸಿಬಿಐ ಪರ ವಕೀಲರು ವಾದ ಮಂಡಿಸಿ, ಭದ್ರತೆಯ ಕಾರಣದಿಂದ ಆರೋಪಿಯನ್ನು ಜಮ್ಮು-ಕಾಶ್ಮೀರಕ್ಕೆ ಕರೆದೊಯ್ಯಲು ಸಾಧ್ಯವಾಗದು ಎಂದು ಹೇಳಿದರು. ಅಲ್ಲದೆ, ಪಾಟೀ ಸವಾಲನ್ನು ಆನ್‌ಲೈನ್ ಮೂಲಕವೇ ನಡೆಸಲು ಅನುಮತಿಸಬೇಕು ಎಂದು ನ್ಯಾಯಪೀಠವನ್ನು ಕೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪಾಟೀ ಸವಾಲು ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಸುವುದಾದರೂ ಹೇಗೆ? ಅಜ್ಮಲ್ ಕಸಬ್ ಕೂಡ ನ್ಯಾಯಯುತ ವಿಚಾರಣೆ ಎದುರಿಸಿದ್ದ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆತನಿಗೆ ಕಾನೂನು ನೆರವು ನೀಡಲಾಗಿತ್ತು ಎಂಬುದನ್ನು ನೆನಪಿಸಿತು.
ಆ ಬಳಿಕ, ಯಾಸೀನ್ ಮಲ್ಲಿಕ್ ಬಂಧಿಯಾಗಿರುವ ತಿಹಾರ್ ಜೈಲಿನಲ್ಲೇ ವಿಶೇಷ ನ್ಯಾಯಾಲಯ ಸ್ಥಾಪಿಸುವ ಸೂಚನೆ ನೀಡಿದೆ. ಜೈಲಿನ ಆವರಣದಲ್ಲೇ ಮಲಿಕ್ ವಿಚಾರಣೆ ನಡೆಸಲು ನಾವು ಆದೇಶ ನೀಡುತ್ತಿದ್ದೇವೆ. ಅದಕ್ಕಾಗಿ ನ್ಯಾಯಾಧೀಶರು ನವದೆಹಲಿಗೆ ಬರುವಂತೆ ನಾನು ಸೂಚಿಸುತ್ತಿದ್ದೇವೆ ಎಂದು ನ್ಯಾಯಪೀಠ ಹೇಳಿತು.