ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ, ಚುನಾವಣಾಧಿಕಾರಿ, ಆಡಳಿತಾಧಿಕಾರಿ ನೇಮಕ: ಅರ್ಜಿಗಳ ವಿಚಾರಣೆ ಪೂರ್ಣ, ಇಂದು ತೀರ್ಪು ಪ್ರಕಟ
ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ, ಚುನಾವಣಾಧಿಕಾರಿ, ಆಡಳಿತಾಧಿಕಾರಿ ನೇಮಕ: ಅರ್ಜಿಗಳ ವಿಚಾರಣೆ ಪೂರ್ಣ, ಇಂದು ತೀರ್ಪು ಪ್ರಕಟ
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣಾ ಪ್ರಕ್ರಿಯೆ, ಚುನಾವಣಾಧಿಕಾರಿ ನೇಮಕ ಹಾಗೂ ರಾಜ್ಯ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪೂರ್ಣಗೊಳಿಸಿದೆ. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಇಂದು (ಗುರುವಾರ) ತೀರ್ಪು ಪ್ರಕಟಗೊಳ್ಳಲಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅರ್ಜಿಗಳ ಬಗ್ಗೆ ತೀರ್ಪು ಪ್ರಕಟಿಸಲಿದೆ. ಹೈಕೋರ್ಟ್ ನ್ಯಾಯಪೀಠದ ಮುಂದೆ ಸಲ್ಲಿಸಲಾಗಿರುವ ಅರ್ಜಿಗಳ ವಾದ ಮತ್ತು ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.
ರಾಜ್ಯಾದ್ಯಂತ ಆರು ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಪ್ರತಿಷ್ಠಿತ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. ಇಬ್ಬರು ಮಾಜಿ ಅಧ್ಯಕ್ಷರು ದೂರು ನೀಡಿದ್ದಾರೆ.
ಸಂಘದ ಸದಸ್ಯರು ದೂರು ಕೊಟ್ಟಿದ್ದಾರೆ ಎಂದ ಮಾತ್ರಕ್ಕೆ ಇಂತಹ ದೊಡ್ಡ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಿರುವುದು ಅರಿಯಲ್ಲ. ಸರ್ಕಾರದ ಕ್ರಮವನ್ನು ಒಪ್ಪಲಾಗದು. ನೇಮಕ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಸಂಘದ ಆಡಳಿತದ ಅಧಿಕಾರಾವಧಿ ಮುಗಿದಿದೆ. ಆದರೆ, ಆಡಳಿತ ಮಂಡಳಿಯ ಪದಾಧಿಕಾರಿಗಳು ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆ ಅರ್ಧ ಹಾದಿಯನ್ನು ಕ್ರಮಿಸಿದೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿರುವುದು ಸರಿಯಲ್ಲ. ಇದು ಚುನಾವಣೆ ಪ್ರಕ್ರಿಯೆಯಲ್ಲಿ ಬಲವಂತದ ಹಸ್ತಕ್ಷೇಪವಾಗಿದೆ ಎಂದು ವಾದಿಸಿರುವ ಅರ್ಜಿದಾರರು, ಆಡಳಿತಾಧಿಕಾರಿಯ ನೇಮಕ ಆದೇಶ ರದ್ದಾಗಬೇಕು ಎಂದು ಕೋರಿದ್ದಾರೆ.