ಸರ್ಕಾರಿ ನೌಕರರ ಸಂಘದ ಬಹುಕೋಟಿ ಹಗರಣ ವಿಚಾರಣೆ ಸಿಜೆ ಪೀಠಕ್ಕೆ: ಆಡಳಿತಾಧಿಕಾರಿ ನೇಮಕ ಹಾಗೂ ಮುಕ್ತ ಚುನಾವಣೆ ಕುರಿತ ರಿಟ್ ಜೊತೆ ವಿಚಾರಣೆ-ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಸಂಘದ ಬಹುಕೋಟಿ ಹಗರಣ ವಿಚಾರಣೆ ಸಿಜೆ ಪೀಠಕ್ಕೆ
ಆಡಳಿತಾಧಿಕಾರಿ ನೇಮಕ ಹಾಗೂ ಮುಕ್ತ ಚುನಾವಣೆ ಕುರಿತ ರಿಟ್ ಜೊತೆ ವಿಚಾರಣೆ
ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
# 2019-2024ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ನಡೆದ ಬಹುಕೋಟಿ ಅಕ್ರಮಗಳ ತನಿಖೆ ಪ್ರಕರಣ
# ಸಂಬಂಧಿತ ಇತರ ರಿಟ್ ಅರ್ಜಿಗಳ ಜೊತೆ ಪರಿಗಣನೆಗೆ ಕೋರಿ ಹೈಕೋರ್ಟ್ ನ ಮಾನ್ಯ ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರು ಮತ್ತು ಜಿಲ್ಲಾ, ತಾಲೂಕು ಹಾಗೂ ಯೋಜನಾ ಶಾಖೆಗಳಲ್ಲಿ 2019-24ರ ಅವಧಿಯಲ್ಲಿ ಆರ್ಥಿಕ ಅವ್ಯವಹಾರ ಹಾಗೂ ತೆರಿಗೆ ವಂಚನೆಯ ಬಹುಕೋಟಿ ಹಗರಣ ನಡೆದಿದ್ದು ತನಿಖೆ ನಡೆಸುವಂತೆ ಸಚಿವಾಲಯದ ಅಧಿಕಾರಿಗಳು ಹಾಗೂ ಇತರ ಸರಕಾರಿ ನೌಕರರು ಸರಕಾರಕ್ಕೆ ದೂರು ಸಲ್ಲಿಸಿದ್ದರು.
ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆ 1960ರ ಸೆಕ್ಷನ್ 25 ರ ಅಡಿ ರಾಜ್ಯ ಸರಕಾರಿ ನೌಕರರ ಸಂಘದ ಅವ್ಯವಹಾರಗಳ ತನಿಖೆಗೆ ಸರಕಾರ ಆದೇಶ ನೀಡಿತ್ತು. ಬೆಂಗಳೂರಿನ ಜಿಲ್ಲಾ ನೋಂದಣಾಧಿಕಾರಿಗಳು ತಮ್ಮ ಪತ್ರ ಸಂಖ್ಯೆ ಡಿ ಆರ್ ಬಿ 4/ಎಸ್ಓಆರ್/ 26- 2023-24 ದಿನಾಂಕ 30.6.2023 ಪ್ರಕಾರ ಸಂಘದಲ್ಲಿ ಜರಗಿದ ಅವ್ಯವಹಾರಗಳ ತನಿಖೆಗೆ ಚಾಲನೆ ನೀಡಲಾಗಿತ್ತು.
ಸಂಘಗಳ ನೋಂದಣಿ ಕಾಯ್ದೆ 1960 ರ ಸೆಕ್ಷನ್ 25 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಸರಕಾರ ನೀಡಿದ ಆದೇಶವನ್ನು ರಾಜ್ಯ ಸಂಘವು ಮಾನ್ಯ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 20700/2023 ಸಲ್ಲಿಸಿ ಪ್ರಶ್ನಿಸಿದ್ದು ವಿಚಾರಣೆ ನಡೆಸಲು ಸರಕಾರ ಹೊರಡಿಸಿದ ಆದೇಶಕ್ಕೆ ತಡೆಯಾಜ್ಞೆ ತರಲಾಗಿದೆ.
ಸಂಘದ 5 ವರ್ಷಗಳ ಅವಧಿ ದಿನಾಂಕ 6.8.2024 ರಂದು ಮುಗಿದಿದ್ದು ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಸಲುವಾಗಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಕೋರಿ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಪಿ. ಮಂಜೇಗೌಡ, ಎನ್.ಪಿ.ಎಸ್. ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಾಂತರಾಮ್, ರಾಜ್ಯ ಪರಿಷತ್ ಸದಸ್ಯರಾದ ಶ್ರೀ ಗಂಗಾಧರ್ ಬಿ. ಇವರುಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದರು.
ಸದರಿ ಮನವಿ ಕುರಿತು ವಿಚಾರಣೆ ನಡೆಸಿ ಸಹಕಾರ ಇಲಾಖೆಯ ಅಧಿಕಾರಿಗಳು ನೀಡಿದ ವರದಿಯ ಆಧಾರದಲ್ಲಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಸರಕಾರವು ದಿನಾಂಕ 7-10-2024 ರಂದು ಆದೇಶ ಹೊರಡಿಸಿತ್ತು. ದಿನಾಂಕ 8.10.2024 ರಂದು ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಂಡರು.
ಆಡಳಿತಾಧಿಕಾರಿಯವರು ದಿನಾಂಕ 8.10.2024 ರಂದು ಅಧಿಕಾರ ವಹಿಸಿಕೊಂಡ ಬಳಿಕ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳು ವೈಯಕ್ತಿಕ ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ಆದೇಶವನ್ನು ಪ್ರಶ್ನಿಸ ಬೇಕಿತ್ತು. ಬದಲಿಗೆ ಅಸ್ತಿತ್ವ ಕಳೆದುಕೊಂಡ ಹುದ್ದೆಯಡಿ ಸಂಘದ ಪದಾಧಿಕಾರಿಗಳ ನೆಲೆಯಲ್ಲಿ ಮಾನ್ಯ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 27644/2024 ದಾಖಲಿಸಿ ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯವು ನೀಡಿದ ತಡೆಯಾಜ್ಞೆಯನ್ನು ಪ್ರಶ್ನಿಸಿ ರಾಜ್ಯ ಸಂಘವು ರಿಟ್ ಅರ್ಜಿ ಸಂಖ್ಯೆ 27308/2024 ದಾಖಲಿಸಿ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರಲಾಯಿತು.
ಹಾಗೆಯೇ ಸಂಘದ ಉಪನಿಯಮ 9 ರ ತಿದ್ದುಪಡಿಯನ್ನು ಪ್ರಶ್ನಿಸಿ ರಿಟ್ ಅರ್ಜಿ ಸಂಖ್ಯೆ 27574/2024 ದಾಖಲಿಸಲಾಗಿದೆ.
ಮೇಲ್ಕಾಣಿಸಿದ ನಾಲ್ಕು ರಿಟ್ ಅರ್ಜಿಗಳು ಒಂದಕ್ಕೊಂದು ಸಂಬಂಧಪಟ್ಟಿವೆ ಎಂಬ ಕಾರಣಕ್ಕೆ ಅವುಗಳನ್ನು ಸಂಯೋಜಿಸಿ ಜೊತೆ ಜೊತೆಗೆ ವಿಚಾರಣೆ ನಡೆಸಲಾಗುತ್ತಿತ್ತು.
ಇದೀಗ ಬಹುಕೋಟಿ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿತ ರಿಟ್ ಅರ್ಜಿದಾರರ ಪರ ವಕೀಲರು ಸಾಮಾನ್ಯ ಸಂಕೀರ್ಣ ವಿಷಯಗಳೆಂದು ವರ್ಗೀಕರಿಸಿದ ಈ ರಿಟ್ ಅರ್ಜಿಯನ್ನು ವ್ಯವಹರಿಸಲು ನ್ಯಾಯಾಲಯ ರೋಸ್ಟರ್ ಹೊಂದಿಲ್ಲ ಎಂದು ವಾದಿಸಿದ್ದಾರೆ.
ರಿಟ್ ಅರ್ಜಿ 27644/2024 ಮತ್ತು ಸಂಬಂಧಿತ ಅರ್ಜಿಗಳಲ್ಲಿ ಅಂಗೀಕರಿಸಬಹುದಾದ ಯಾವುದೇ ನಿರ್ದೇಶನಗಳಂತೆ ಇತರ ರಿಟ್ ಅರ್ಜಿ ಗಳೊಂದಿಗೆ ಸದರಿ ರಿಟ್ ಅರ್ಜಿ ಸಂಖ್ಯೆ 20700/2023 ಅನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಪರಿಗಣಿಸಲು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಲು ದಿನಾಂಕ 23.11.2024 ರಂದು ಏಕಸದಸ್ಯ ನ್ಯಾಯಪೀಠವು ಆದೇಶಿಸಿದೆ.