ಮತ್ತೆ ಕೋರ್ಟ್ ಆದೇಶ ಉಲ್ಲಂಘನೆ: ದ.ಕ. ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹೈಡ್ರಾಮ, ಚುನಾವಣಾಧಿಕಾರಿ ರಾಜೀನಾಮೆ, ಪ್ರಭಾರಿಯಿಂದ ಮತ್ತೆ ಲೋಪ
ಮತ್ತೆ ಕೋರ್ಟ್ ಆದೇಶ ಉಲ್ಲಂಘನೆ: ದ.ಕ. ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹೈಡ್ರಾಮ, ಚುನಾವಣಾಧಿಕಾರಿ ರಾಜೀನಾಮೆ, ಪ್ರಭಾರಿಯಿಂದ ಮತ್ತೆ ಲೋಪ
# ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣೆ
# ಚುನಾವಣಾಧಿಕಾರಿಯ ಹೈ ಡ್ರಾಮಾ, ದಿಡೀರ್ ರಾಜೀನಾಮೆ
# ಪ್ರಭಾರ ಚುನಾವಣಾ ಅಧಿಕಾರಿಯಿಂದ ಮತ್ತೊಮ್ಮೆ ಕೋರ್ಟ್ ಆದೇಶ ಉಲ್ಲಂಘನೆ
ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರುಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರಿಗೆ ಅವಕಾಶ ನೀಡುವಂತೆ ಚುನಾವಣಾ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿತ್ತು.
ಸದರಿ ಆದೇಶವನ್ನು ಚುನಾವಣಾ ಅಧಿಕಾರಿ ಶಿವಾನಂದ ಅವರು ಪಾಲಿಸದಿದ್ದ ಕಾರಣಕ್ಕಾಗಿ ನ್ಯಾಯಾಂಗ ನಿಂದನಾ ಅರ್ಜಿ ದಾಖಲಿಸಲಾಗಿತ್ತು.
ನ್ಯಾಯಾಂಗ ನಿಂದನಾ ಅರ್ಜಿಯ ಮೇಲೆ ಮಾನ್ಯ ನ್ಯಾಯಾಲಯವು ಹೊರಡಿಸಿದ ಆದೇಶಕ್ಕೆ ತಲೆಬಾಗಿ ಚುನಾವಣಾ ಅಧಿಕಾರಿ ಪರಿಷ್ಕೃತ ಆದೇಶವನ್ನು ಹೊರಡಿಸಿ ನ್ಯಾಯಾಂಗ ಇಲಾಖೆಯ ಈಗಾಗಲೇ ಪ್ರಕಟಿಸಿರುವ ಅವಿರೋಧವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ರದ್ದು ಪಡಿಸಿ ಮತಕ್ಷೇತ್ರ ಸಂಖ್ಯೆ 47 ನ್ಯಾಯಾಂಗ ಇಲಾಖೆಗೆ ದಿನಾಂಕ 16.11.2024 ರಂದು ಚುನಾವಣೆ ನಡೆಸಲು ನಿರ್ಧರಿಸಿ ಸದರಿ ಆದೇಶವನ್ನು ಪ್ರಕಾಶ್ ನಾಯಕ್ ಅವರಿಗೆ ನೀಡಿದ್ದರು.
ನ್ಯಾಯಾಂಗ ಇಲಾಖೆಯ ಮತಕ್ಷೇತ್ರ 47ರ ಚುನಾವಣೆ ನಡೆಸಲು ಪರಿಷ್ಕೃತ ನಡವಳಿ ಹೊರಡಿಸಿ ದಿನಾಂಕ 13.11.2024ರಂದು ಆದೇಶ ನೀಡಿದ್ದರು.
ದಿನಾಂಕ 16.11.2024ರಂದು ಮತ ಕ್ಷೇತ್ರ 47 ರ ಅಭ್ಯರ್ಥಿ ಪ್ರಕಾಶ್ ನಾಯಕ್ ಅವರು ಚುನಾವಣಾ ಕಚೇರಿಗೆ ಆಗಮಿಸಿ ವಿಚಾರಿಸಿದಾಗ ಚುನಾವಣಾಧಿಕಾರಿಯಾಗಿದ್ದ ಶಿವಾನಂದ ಅವರು ರಾಜೀನಾಮೆ ನೀಡಿದ್ದು ಜಗಜೀವನದಾಸ್ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿಯವರು ನೇಮಕ ಮಾಡಿದ್ದಾರೆ ಎಂಬ ವಿಷಯ ತಿಳಿದುಬಂತು.
ಕಾರ್ಯದರ್ಶಿ ನೀಡಿದ ಪಟ್ಟಿಯಲ್ಲಿ ನ್ಯಾಯಾಂಗ ಇಲಾಖೆಯ ಅಭ್ಯರ್ಥಿಗಳ ಹೆಸರು ಇಲ್ಲ. ಆದುದರಿಂದ ನ್ಯಾಯಾಂಗ ಇಲಾಖೆಯ ಚುನಾವಣೆಗೆ ಅವಕಾಶವಿಲ್ಲ ಎಂದು ಜಗಜೀವನದಾಸ್ ತಿಳಿಸಿದರು.
ಮಾನ್ಯ ನ್ಯಾಯಾಲಯವು ನ್ಯಾಯಾಂಗ ನಿಂದನಾ ಅರ್ಜಿ ಪ್ರಕರಣದಲ್ಲಿ ಹೊರಡಿಸಿದ ಆದೇಶ ಹಾಗೂ ದಿನಾಂಕ 13.11.2024 ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡಿ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿಯನ್ನು ಚುನಾವಣಾ ಅಧಿಕಾರಿ ಜಗಜೀವನದಾಸ್ ಆವರಿಗೆ ನೀಡಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕೆಂದು ತಿಳಿಸಿದಾಗ ತನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ನೀಡಿರುತ್ತಾರೆ.
ಮಂಗಳೂರು ದಕ್ಷಿಣ ಆರಕ್ಷಕ ಠಾಣೆಯ ಉಪ ನಿರೀಕ್ಷಕರ ಮಾತಿಗೂ ಬೆಲೆ ನೀಡದೆ ನ್ಯಾಯಾಂಗ ನಿಂದನೆಯ ಅಪರಾಧ ಎಸಗಿದ್ದಾರೆ. ನ್ಯಾಯಾಂಗ ಆದೇಶವನ್ನು ಧಿಕ್ಕರಿಸಿದ ಇಬ್ಬರು ಚುನಾವಣಾ ಅಧಿಕಾರಿಗಳು ಹಾಗೂ ಸಂಘದ ಹಂಗಾಮಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.
ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಉಳಿದ 11 ಇಲಾಖೆಗಳಿಗೆ ಚುನಾವಣೆ ನಡೆಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ನೌಕರರ ಮತಕ್ಷೇತ್ರದಿಂದ ಸ್ಪರ್ಧಿಸಿದ ಸಂಘದ ಹಂಗಾಮಿ ಅಧ್ಯಕ್ಷರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿ ಜಯ ಗಳಿಸಿದ್ದಾರೆ ಎಂದು ತಿಳಿದು ಬಂದಿದೆ.
ನ್ಯಾಯಾಂಗ ಆದೇಶವನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿದ ಚುನಾವಣಾ ಅಧಿಕಾರಿಗಳಿಗೆ ಮತ್ತು ಸಂಘದ ಪದಾಧಿಕಾರಿಗಳಿಗೆ ಜೈಲು ಶಿಕ್ಷೆ, ಆಸ್ತಿ ಜಪ್ತಿಯ ಆತಂಕ ಎದುರಾಗಿದೆ. ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮುಂದಿನ ವಾರ ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.