2025ನೇ ವರ್ಷದ ಕರ್ನಾಟಕ ಹೈಕೋರ್ಟ್ ಕ್ಯಾಲೆಂಡರ್ ಪ್ರಕಟ- ನಾಲ್ಕನೇ ವಾರಾಂತ್ಯದ 6 ರಜೆಗೆ ಬ್ರೇಕ್?
2025ನೇ ವರ್ಷದ ಕರ್ನಾಟಕ ಹೈಕೋರ್ಟ್ ಕ್ಯಾಲೆಂಡರ್ ಪ್ರಕಟ- ನಾಲ್ಕನೇ ವಾರಾಂತ್ಯದ 6 ರಜೆಗೆ ಬ್ರೇಕ್?
ಮಾನ್ಯ ಕರ್ನಾಟಕ ಹೈಕೋರ್ಟ್ 2025 ನೇ ಸಾಲಿನ ಕ್ಯಾಲೆಂಡರ್ ಪ್ರಕಟಿಸಿದೆ.
ಮಾನ್ಯ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ 2025ನೆಯ ಕ್ಯಾಲೆಂಡರ್ ನಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ನೂತನ ವರ್ಷಾರಂಭದ ದಿನ (1.1.2025), ಹೋಲಿ (13.3.2025) ವರಮಹಾಲಕ್ಷ್ಮಿ ವೃತ ,(8.8.2025), ಸ್ವರ್ಣ ಗೌರಿ ವೃತ (26.8.2025) ಸೇರಿದಂತೆ 25.8.2025 ಮತ್ತು 21.10.2025 ರಂದು ಆರು ದಿನಗಳ ಹೆಚ್ಚುವರಿ ರಜೆಯನ್ನು ಘೋಷಿಸಿದೆ.
ಸದರಿ 6 ರಜಾ ದಿನಗಳನ್ನು ಸರಿದೂಗಿಸಲು 2025 ನೇ ಇಸವಿಯ ಜನವರಿ, ಮಾರ್ಚ್, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಾಲ್ಕನೆಯ ಶನಿವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು ಕಾರ್ಯ ನಿರ್ವಹಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಸದರಿ 6 ದಿನಗಳ ಹೆಚ್ಚುವರಿ ರಜೆ ನ್ಯಾಯಾಂಗ ಇಲಾಖೆಗೆ ಮಾತ್ರ ಲಭ್ಯವಿದ್ದು ಕಾರ್ಯಾಂಗದ ಇಲಾಖೆಗಳಿಗೆ ಸದರಿ ದಿನಗಳಂದು ರಜೆ ಇರುವುದಿಲ್ಲ.
ಪ್ರತಿ ತಿಂಗಳ ನಾಲ್ಕನೇ ಶನಿವಾರದಂದು ಕಾರ್ಯಾಂಗದ ಇಲಾಖೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ನ್ಯಾಯಾಂಗ ಇಲಾಖೆಯ ನೌಕರರು ಪೂರ್ವಾಹ್ನ 10 ರಿಂದ ಅಪರಾಹ್ನ 2 ಗಂಟೆ ವರೆಗೆ ಕಚೇರಿ ಕೆಲಸ ನಿರ್ವಹಿಸಬೇಕು. ಆದರೆ ಅಂದು ತೆರೆದ ನ್ಯಾಯಾಲಯದಲ್ಲಿ ಕಲಾಪಗಳು ಇರುವುದಿಲ್ಲ.
2025 ನೇ ಕ್ಯಾಲೆಂಡರ್ ವರ್ಷದಲ್ಲಿ ಮಹಾಪುರುಷರ ಜಯಂತಿ, ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳು ಸೇರಿ ಒಟ್ಟು 19 ದಿನಗಳ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
2025 ನೇ ಕ್ಯಾಲೆಂಡರ್ ವರ್ಷದಲ್ಲಿ 20 ದಿನಗಳ ಪರಿಮಿತ ರಜಾ ದಿನಗಳ ಯಾದಿಯಲ್ಲಿ 2 ದಿನಗಳ ಪರಿಮಿತ ರಜೆಯನ್ನು ಬಳಸಿಕೊಳ್ಳಲು ಸರಕಾರಿ ನೌಕರರಿಗೆ ಅವಕಾಶವಿದೆ.
2025 ರ ಹೈಕೋರ್ಟ್ ಕ್ಯಾಲೆಂಡರ್ ಪ್ರಕಾರ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುವ ಸಿವಿಲ್ ನ್ಯಾಯಾಲಯಗಳಿಗೆ ಬೇಸಿಗೆ ರಜೆಯನ್ನು 5.5.2025 ರಿಂದ 31.5.2025 ರ ವರೆಗೆ ಘೋಷಿಸಲಾಗಿದೆ.
ದಸರಾ ರಜೆಯನ್ನು 29.9.2025 ರಿಂದ 6.10.2025 ರ ವರೆಗೆ ಘೋಷಿಸಲಾಗಿದೆ.
ಚಳಿಗಾಲದ ರಜೆಯನ್ನು 20.12.2025 ರಿಂದ 31.12.2025 ರ ವರೆಗೆ ಘೋಷಿಸಲಾಗಿದೆ.
ಆದರೆ ಕ್ರಿಮಿನಲ್ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು, ಮೋಟಾರು ವಾಹನ ನ್ಯಾಯಮಂಡಳಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
2024 ನೇ ಸಾಲಿನ ಹೈಕೋರ್ಟ್ ಕ್ಯಾಲೆಂಡರ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನ್ಯಾಯಾಂಗ ಇಲಾಖೆಯ ನೌಕರರಿಗೆ ರಜೆ ಘೋಷಿಸಲಾಗಿತ್ತು. ಆದರೆ 2025 ರ ಕ್ಯಾಲೆಂಡರ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಆಚರಣೆಗೆ ರಜೆ ಘೋಷಿಸಿಲ್ಲ.
ಮಾನ್ಯ ಹೈಕೋರ್ಟಿನ ಈ ನಿರ್ಧಾರವು ಮೊಸರು ಕುಡಿಕೆ (ವಿಟ್ಲ ಪಿಂಡಿ) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನ್ಯಾಯಾಂಗ ನೌಕರರಿಗೆ ನಿರಾಶೆ ಉಂಟುಮಾಡಿದೆ.