ಮದರಸಾ ಕಾಯ್ದೆ ನ್ಯಾಯಸಮ್ಮತವಾಗಿದೆ: ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ ಮಹತ್ವದ ತೀರ್ಪಿತ್ತ ಸುಪ್ರೀಂ ಕೋರ್ಟ್
ಮದರಸಾ ಕಾಯ್ದೆ ನ್ಯಾಯಸಮ್ಮತವಾಗಿದೆ: ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ ಮಹತ್ವದ ತೀರ್ಪಿತ್ತ ಸುಪ್ರೀಂ ಕೋರ್ಟ್
ಮದರಸಾ ಕಾಯ್ದೆ ಕಾನೂನುಬದ್ಧವಾಗಿದ್ದು, ನ್ಯಾಯಸಮ್ಮತವಾಗಿದೆ. ಹಾಗೂ ಈ ಕಾಯ್ದೆ ಜಾತ್ಯತೀತ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಉತ್ತರ ಪ್ರದೇಶದ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ- 2004ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮದರಸಾ ಕಾಯ್ದೆ ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಜಾತ್ಯತೀತ ತತ್ವದ ಆಧಾರದ ಮೇಲೆ ಕಾಯ್ದೆಯೊಂದನ್ನು ರದ್ದುಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಪಪಡಿಸಿತು. ಇದೇ ವೇಳೆ, ಕಾಯ್ದೆಯೊಂದನ್ನು ಶಾಸನಬದ್ಧವಾಗಿ ರೂಪಿಸಿರದೇ ಇದ್ದಲ್ಲಿ ಸಂವಿಧಾನದ ಇತರ ಅವಕಾಶಗಳನ್ನು ಉಲ್ಲಂಘಿಸುತ್ತಿದ್ದರೆ, ಅಂತಹ ಕಾಯ್ದೆಯನ್ನು ಮಾತ್ರ ಕಾನೂನುಬಾಹಿರ ಎಂದು ಘೋಷಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 13,364 ಮದರಸಾಗಳು ಇವೆ. ಈ ಮದರಸಾಗಳಲ್ಲಿ 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಈ ಮದರಸಾಗಳನ್ನು ಮುಚ್ಚಿ, ಅಲ್ಲಿರುವ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ ಮಾಡುವಂತೆ ಈ ಹಿಂದೆ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು.
ಈ ತೀರ್ಪು ರದ್ದು ಆದ ಪರಿಣಾಮವಾಗಿ ಉತ್ತರ ಪ್ರದೇಶದ ಮದರಸಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. ಮದರಸಾಗಳು ಧಾರ್ಮಿಕ ಬೋಧನೆಯಲ್ಲಿ ತೊಡಗಿದ್ದರೂ ಅದರ ಮೂಲ ಉದ್ದೇಶ ಶಿಕ್ಷಣ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕಾದ ಹೊಣೆ ಸರ್ಕಾರಗಳ ಮೇಲೆ ಇದೆ. ಆದರೂ, ತಮ್ಮ ಸಂಸ್ಥೆಗಳ ವಿಚಾರವಾಗಿ ಧಾರ್ಮಿಕ ಅಲ್ಪಸಂಖ್ಯಾತರು ಹೊಂದಿರುವ ಹಕ್ಕುಗಳು ಈ ಹೊಣೆಗೆ ಅಡ್ಡಿಯಾಗುವ ರೀತಿಯಲ್ಲೇನೂ ಇಲ್ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.