ಹಲವು ಬಾರಿ ಠಾಣೆಗೆ ಅಲೆದಾಡಿದರೂ ದೂರು ದಾಖಲಿಸದ ಪೊಲೀಸರು: ದೂರುದಾರರಿಗೆ 20 ಸಾವಿರ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಹಲವು ಬಾರಿ ಠಾಣೆಗೆ ಅಲೆದಾಡಿದರೂ ದೂರು ದಾಖಲಿಸದ ಪೊಲೀಸರು: ದೂರುದಾರರಿಗೆ 20 ಸಾವಿರ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ
ಪೊಲೀಸ್ ಠಾಣೆಗೆ ಹಲವಾರು ಬಾರಿ ಅಲೆದಾಡಿದರೂ ದೂರು ದಾಖಲಿಸದ ಮುಂಬೈ ಪೊಲೀಸ್ ವಿರುದ್ಧ ಬಾಂಬೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಮಾಡಿದ ಪ್ರಮಾದಕ್ಕೆ ದೂರುದಾರರಿಗೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ರಾಜ್ಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರೇವತಿ ಮೋಹಿತ್ ದೇರೆ ಹಾಗೂ ಪ್ರಥ್ವೀರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಬೆಂಗಳೂರು ಮೂಲದ ಅಭಿನವ್ ಮುಂಬೈನಲ್ಲಿ ಉದ್ಯೋಗದಲ್ಲಿ ಇದ್ದರು. ಈ ವೇಳೆ, ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಜನವರಿ 6ರಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರವಾಗಿ ಅವರ ತಂದೆ ಅನಿಲ್ ಕುಮಾರ್ ಮುಂಬೈ ರಾಕ್‌ಮಾರ್ಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದರು. ನಂತರ ದೂರುದಾರರು ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿ ಅಲ್ಲಿಂದ ಪೊಲೀಸರಿಗೆ ದೂರು ದಾಖಲಿಸಿಕೊಳ್ಳುವಂತೆ ನ್ಯಾಯಾಲಯದಿಂದ ನಿರ್ದೇಶನ ಪಡೆದುಕೊಂಡಿದ್ದರು.
ಹಾಗಿದ್ದರೂ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದರು. ಕೋರ್ಟ್ ಆದೇಶವನ್ನೇ ಪೊಲೀಸರು ಧಿಕ್ಕರಿಸಿದಾಗ, ಎಫ್‌ಐಆರ್ ಹಾಕಲು ನಿರಾಕರಿಸಿದಾಗ ಮೃತರ ಹೆತ್ತವರು ಹೈಕೋರ್ಟ್ ಮೊರೆ ಹೋದರು. ಮನವಿಯಲ್ಲಿ ಮ್ಯಾಜಿಸ್ಟ್ರೇಟರ ಆದೇಶದಂತೆ ಎಫ್‌ಐಆರ್ ದಾಖಲಿಸಲು ನಿರ್ದೇಶನವನ್ನು ಕೋರಿದರು.
ಮನವಿ ಆಲಿಸಿದ ವಿಭಾಗೀಯ ಪೀಠ, ಜೂನ್ ತಿಂಗಳಲ್ಲಿ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ ನಂತರವೂ ಪೊಲೀಸರು ಎಫ್‌ಐಆರ್ ದಾಖಲಿಸದೇ ಇರುವುದು ಮತ್ತು ಅರ್ಜಿದಾರರನ್ನು ದೂರು ದಾಖಲಿಸುವ ವಿಚಾರವಾಗಿ ಈ ರೀತಿ ಅಲೆದಾಡಿಸಿರುವುದಕ್ಕೆ 20 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದೆ.