ಖಾಸಗಿ ಸೊತ್ತು ಸಮುದಾಯದ ಪಾಲಾಗಲ್ಲ: ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಮಹತ್ವದ ತೀರ್ಪು
ಖಾಸಗಿ ಸೊತ್ತು ಸಮುದಾಯದ ಪಾಲಾಗಲ್ಲ: ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಮಹತ್ವದ ತೀರ್ಪು
ಖಾಸಗಿ ಒಡೆತನದಲ್ಲಿ ಇರುವ ಎಲ್ಲ ಸಂಪನ್ಮೂಲಗಳನ್ನು ಸರ್ಕಾರ ಸ್ವಾಧೀನಪಡಿಸುವಂತಿಲ್ಲ. ಅದೇ ರೀತಿ, ಖಾಶಗಿ ಸೊತ್ತು ಸಮುದಾಯದ ಪಾಲಾಗಲ್ಲ ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ಮಹತ್ವದ ತೀರ್ಪು ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಸಂವಿಧಾನದ ಪೀಠ 7:2ರ ಬಹುಮತದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಜೆ.ಬಿ. ಪರ್ದೀವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್‌ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಬಹುಮತದ ತೀರ್ಪಿಗೆ ಸಹಿ ಹಾಕಿದರು. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಸುಧಾಂಶು ಧುಲಿಯಾ ಅವರು ಭಿನ್ನ ತೀರ್ಪು ನೀಡಿದ್ದಾರೆ.
ಖಾಸಗಿ ಸೊತ್ತು ಸಮುದಾಯದ ಅಥವಾ ಸರ್ಕಾರ ಸ್ವಾಧೀನವಾಗದು. ಆದರೆ, ಸಮುದಾಯದ ವಶದಲ್ಲಿ ಇರುವ ಭೌತಿಕ ರೂಪದ ಸಂಪನ್ಮೂಲಗಳನ್ನು ಜನಮೂಹದ ಒಳಿತಿಗಾಗಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ.
ಕರ್ನಾಟಕ ಸರ್ಕಾರ Vs ರಂಗನಾಥ ರೆಡ್ಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಆ ಪ್ರಕರಣದಲ್ಲಿ ಅಂದಿನ (1977) ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ನ್ಯಾಯಪೀಠವು ನೀಡಿದ್ದ ತೀರ್ಪು ನಿರ್ದಿಷ್ಟವಾದ ಆರ್ಥಿಕ ಮತ್ತು ಸಮಾಜವಾದಿ ಸಿದ್ದಾಂತದಿಂದ ಪ್ರೇರಿತವಾಗಿತ್ತು ಎಂದು ಅಭಿಪ್ರಾಯಪಟ್ಟಿದೆ.
ಆದರೆ, ತೀರ್ಪು ಪ್ರಕಟಿಸುವ ವೇಳೆ, ಹಿಂದಿನ ನ್ಯಾಯಮೂರ್ತಿಗಳಾದ ಕೃಷ್ಣ ವಿ. ಅಯ್ಯರ್ ಕುರಿತು ಸಿಜೆಐ ಚಂದ್ರಚೂಡ್ ಅಭಿಪ್ರಾಯಕ್ಕೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಸುಧಾಂಶು ಧುಲಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಿಜೆಐ ಚಂದ್ರಚೂಡ್ ಅವರ ಅಭಿಪ್ರಾಯಗಳು ಅನಪೇಕ್ಷಿತ ಹಾಗೂ ಸಮರ್ಥನೀಯವಲ್ಲ ಎಂದು ನಾಗರತ್ನ ಹೇಳಿದರು. ಸಿಜೆಐ ಅವರು ಇಂತಹ ಹೇಳಿಕೆಗಳನ್ನು ತಪ್ಪಿಸಬಹುದಿತ್ತು ಎಂದು ನ್ಯಾಯಮೂರ್ತಿಗಳಾದ ಧುಲಿಯಾ ಅಭಿಪ್ರಾಯಪಟ್ಟರು.
ಸರ್ಕಾರದ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳಾಗಿವೆ ಎಂದ ಮಾತ್ರಕ್ಕೆ ಈ ಹಿಂದಿನ ನ್ಯಾಯಮೂರ್ತಿಗಳ ತೀರ್ಪಿನಿಂದ ಸಂವಿಧಾನಕ್ಕೆ ಅನ್ಯಾಯವಾಗಿದೆ ಎಂದು ಹೇಳುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಸಿಜೆಐ ಟಿಪ್ಪಣಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲ, ಒಂದು ಹೆಜ್ಜೆ ಮುಂದಕ್ಕೆ ಹೋಗಿ, ನ್ಯಾಯಮೂರ್ತಿ ಅಯ್ಯರ್ ಸಿದ್ಧಾಂತ ಕುರಿತಂತೆ ವ್ಯಕ್ತವಾದ ಹೇಳಿಕೆಗೆ ನನ್ನ ಬಲವಾದ ಅಸಮ್ಮತಿಯನ್ನು ದಾಖಲಿಸುತ್ತಿದ್ದೇನೆ ಎಂದು ನ್ಯಾಯಮೂರ್ತಿ ಧುಲಿಯಾ ಬರೆದಿದ್ದಾರೆ.
ನ್ಯಾಯಪೀಠದ ತೀರ್ಪಿನ ಪ್ರಮುಖ ಅಂಶಗಳು
# ಎಲ್ಲ ಖಾಸಗಿ ಸೊತ್ತುಗಳನ್ನು ಸಮುದಾಯದ ಆಸ್ತಿ ಎಂದು ಹೇಳುವುದು ಸರಿಯಲ್ಲ
# ಆರ್ಥಿಕ ನೀತಿಯ ನಿರೂಪಣೆ ಮಾಡುವುದು ಸುಪ್ರೀಂ ಕೋರ್ಟ್ ಕೆಲಸವಲ್ಲ.
# ಜನರೇ ಆಯ್ಕೆ ಮಾಡಿದ ಸರ್ಕಾರ ವಿವಿಧ ಆರ್ಥಿಕ ನೀತಿಗಳನ್ನು ಅಳವಪಡಿಸಿಕೊಂಡಿದೆ.
# ವ್ಯಕ್ತಿಗಳು ಹೊಂದಿರುವ ಎಲ್ಲ ಸಂಪನ್ಮೂಲಗಳನ್ನು ಸಮುದಾಯದ ಸೊತ್ತು ಎಂದು ಪರಿಗಣಿಸುವುದು ಸಂವಿಧಾನದ ತತ್ವವನ್ನೇ ಬುಡಮೇಲು ಮಾಡಿದಂತೆ.