ಹೊರಗುತ್ತಿಗೆ ನೌಕರರ ಸೇವೆಗೆ ಅಂಕ ನಿರಾಕರಣೆ: ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹೊರಗುತ್ತಿಗೆ ನೌಕರರ ಸೇವೆಗೆ ಅಂಕ ನಿರಾಕರಣೆ: ಸಾಮಾಜಿಕ ನ್ಯಾಯದ ತತ್ವಕ್ಕೆ ವಿರುದ್ಧ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸರ್ಕಾರಿ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಯ ಕೆಲಸದ ಅನುಭವವನ್ನು ಗುರುತಿಸಲು ನಿರಾಕರಿಸುವುದು, ದೇಶದ ಸಂವಿಧಾನ ನೀಡಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾ. ದೀಪಾಂಕರ್ ದತ್ತ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಸಾಮಾಜಿಕ ನ್ಯಾಯವು ದೇಶದ ಸಂವಿಧಾನದ ಉದ್ದಕ್ಕೂ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಬಲಶಾಲಿಗಳು ಮತ್ತು ಬಲಹೀನರ ನಡುವಿನ ಸಂಘರ್ಷ ಉಂಟಾದಾಗ ನ್ಯಾಯಾಲಯಗಳು ದುರ್ಬಲ ಮತ್ತು ಬಡ ವರ್ಗಗಳ ಪರವಾಗಿ ನಿಲ್ಲಬೇಕು ಎಂಬುದನ್ನು ಇದು ಹೇಳುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಮೋನಿಕಾ ಎನ್ನುವವರಿಗೆ 0.5ರಷ್ಟು ಅಂಕ ನೀಡಿ ಅವರನ್ನು ಗುಮಾಸ್ತ ಹುದ್ದೆಗೆ ನೇಮಕಾತಿ ಮಾಡಲು ಪರಿಗಣಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ನೀಡಿತ್ತು. ಇದನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿ ಹಿಡಿದಿತ್ತು.
ವಿಭಾಗೀಯ ಪೀಠದ ಆದೇಶವನ್ನು ಹರಿಯಾಣದ ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾನಿಲಯವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿಶ್ವವಿದ್ಯಾನಿಲಯ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
ಮಹಿಳಾ ಅಭ್ಯರ್ಥಿಯನ್ನು ಈ ಹಿಂದೆ ಹೊರಗುತ್ತಿಗೆ ನಿಯಮಗಳ ಅಡಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಅವರನ್ನು ಖಾಯಂ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ. ಅವರ ಕೆಲಸದ ಅನುಭವವನ್ನು ಮಂಜೂರಾದ ಹುದ್ದೆಯಲ್ಲಿನ ಕೆಲಸದ ಅನುಭವದ ಜೊತೆಗೆ ಹೋಲಿಸಲಾಗದು ಎಂದು ವಿಶ್ವವಿದ್ಯಾನಿಲಯವು ಹೇಳಿತ್ತು.
ವ್ಯಕ್ತಿಯೊಬ್ಬರು ಮಂಜೂರಾದ ಹುದ್ದೆಯಲ್ಲಿ ಕೆಲಸ ಮಾಡಿಲ್ಲ, ಅವರು ಹೊರಗುತ್ತಿಗೆ ಏಜೆನ್ಸಿಯೊಂದರ ಮೂಲಕ ಕೆಲಸ ಮಾಡುತ್ತಿದ್ದರು ಎಂಬ ಕಾರಣಕ್ಕೆ ಅವರ ಅನುಭವಕ್ಕೆ ಅಂಕ ನೀಡಲು ನಿರಾಕರಿಸುವುದು ದುರ್ಬಲರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಹಾಗೂ ಸಮಾನತೆಯನ್ನು ಖಾತರಿಪಡಿಸುವ ಸಂವಿಧಾನಿಕ ಹೊಣೆಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ಅರ್ಹ ಅಭ್ಯರ್ಥಿಗಳಲ್ಲಿ ಅನುಭವ ಹೊಂದಿರುವವರು ಹಾಗೂ ಇತರ ಮಾನದಂಡಗಳಿಗೆ ಅನುಗುಣವಾಗಿ ಸೂಕ್ತರು ಯಾರು ಎಂಬುದನ್ನು ಕಂಡುಕೊಳ್ಳುವುದು ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಪಡೆಯಬೇಕು. ಸೂಕ್ತ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.