ಸಹೋದ್ಯೋಗಿಯ ಸೇವಾ ವಿವರ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ: ಕರ್ನಾಟಕ ಹೈಕೋರ್ಟ್
ಸಹೋದ್ಯೋಗಿಯ ಸೇವಾ ವಿವರ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ: ಕರ್ನಾಟಕ ಹೈಕೋರ್ಟ್
ಕಾನೂನು ವಿವಾದಗಳ ಉದ್ದೇಶಕ್ಕಾಗಿ ತಮ್ಮ ಸಹೋದ್ಯೋಗಿಯ ಸೇವಾ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಎ.ಎಸ್. ಮಲ್ಲಿಕಾರ್ಜುನ ಸ್ವಾಮಿ VS ರಾಜ್ಯ ಮಾಹಿತಿ ಆಯೋಗ ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಅರ್ಜಿದಾರರು ತಮ್ಮ ಸಹೋದ್ಯೋಗಿಯ ಸೇವಾ ವಿವರಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ವೈಯಕ್ತಿಕ ವಿವರಗಳನ್ನು ಸಾರ್ವಜನಿಕರಿಗೆ ಅಥವಾ ಹಿತಾಸಕ್ತಿ ಇಲ್ಲದ ವ್ಯಕ್ತಿಗಳಿಗೆ ನೀಡಲು ನಿರ್ಬಂಧ ಇರುವ ನಿಯಮ ಸೆಕ್ಷನ್ 8(1)(j)ಯನ್ನು ಉಲ್ಲೇಖಿಸಿ ಮಾಹಿತಿಯನ್ನು ಒದಗಿಸಲು ನಿರಾಕರಿಸಲಾಗಿತ್ತು.
ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಮಾಹಿತಿ ಆಯೋಗ ಪುರಸ್ಕರಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರಾದ ಮಲ್ಲಿಕಾರ್ಜುನ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಅರ್ಜಿದಾರರು ಮಾಹಿತಿ ಕೋರಿದ ಸಂಸ್ಥೆಗೆ ಅಪರಿಚಿತರೇನಲ್ಲ. ಹಲವು ವರ್ಷಗಳಿಂದ ಅರ್ಜಿದಾರರು ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂಬುದನ್ನು ಗಮನಿಸಿತು.
ತನ್ನ ಜ್ಯೇಷ್ಟತೆ, ಪದೋನ್ನತಿ ಮತ್ತು ಇತರ ವಿಷಯಗಳಿಗಾಗಿ, ಅರ್ಜಿದಾರರು ತಮ್ಮ ಸಹೋದ್ಯೋಗಿಯ ಸೇವಾ ದಾಖಲೆಯನ್ನು ಕೋರಿದ್ದಾರೆ. ತಮ್ಮ ಉದ್ಯೋಗ ಅಥವಾ ಸೇವಾ ವೃತ್ತಿ ಬಗ್ಗೆ ಅಗತ್ಯವಿರುವ ಮಾಹಿತಿಯನ್ನು ಕೋರುವುದು ತಪ್ಪೇನಲ್ಲ. ಹಾಗಾಗಿ, ಸಹೋದ್ಯೋಗಿಯ ಸೇವಾ ವಿವರ ಮಾಹಿತಿ ಹಕ್ಕಿನಡಿ ಪಡೆದುಕೊಳ್ಳಲು ನೌಕರರಿಗೆ ಹಕ್ಕಿದೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಆದೇಶ ಹೊರಡಿಸಿದ ಮೂರು ವಾರದಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಯನ್ನು ಒದಗಿಸುವಂತೆ ಪ್ರತಿವಾದಿಯವರಿಗೆ ನಿರ್ದೇಶನ ನೀಡಿದ ನ್ಯಾಯಪೀಠ, ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದರೆ, ಪ್ರತಿ ದಿನಕ್ಕೆ ರೂ. 1000/-ದಂತೆ ದಂಡವನ್ನು ತನ್ನ ಜೇಬಿನಿಂದ ನೀಡುವಂತೆ ತಿಳಿಸಿದೆ. ಅಲ್ಲದೆ, ಐದನೇ ಪ್ರತಿವಾದಿಯು ರೂ. 5000/- ಖರ್ಚು ನೀಡುವಂತೆ ತಿಳಿಸಿದೆ.
Employees is entitled under RTI to get service particulars of colleagues for pursuing legal disputes: Justice Krishna S Dixit, Karnataka High Court
ಎ.ಎಸ್. ಮಲ್ಲಿಕಾರ್ಜುನ ಸ್ವಾಮಿ VS ರಾಜ್ಯ ಮಾಹಿತಿ ಆಯೋಗ ಮತ್ತಿತರರು
ಕರ್ನಾಟಕ ಹೈಕೋರ್ಟ್ WP 23695/2022, Dated 22-08-2023