ಮತದಾನ, ಸ್ಪರ್ಧಿಸುವ ಹಕ್ಕು ನಿರಾಕರಣೆ: ದ.ಕ. ಸರ್ಕಾರಿ ನೌಕರರ ಮಾಜಿ ಜಿಲ್ಲಾಧ್ಯಕ್ಷರಿಗೆ ಸ್ಪರ್ಧಿಸುವ ಹಕ್ಕು ನೀಡಿ ನ್ಯಾಯಾಲಯ ತೀರ್ಪು
ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷರಿಗೆ ಮತದಾನದ ಹಕ್ಕು ನಿರಾಕರಣೆ- ಮತದಾನದ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ನೀಡುವಂತೆ ಕೋರ್ಟ್ ಆದೇಶ
2024-2029 ರ ಅವಧಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ಇಲಾಖೆಯ ಮತಕ್ಷೇತ್ರದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದರೂ ಸಂಘ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಿರುವುದರಿಂದ ಮತದಾನ ಮಾಡಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುವುದಿಲ್ಲ ಎಂಬ ನಿಯಮ ಬಾಹಿರ ಷರಾವನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಿ ಮತದಾನದ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ನಿರಾಕರಿಸಲಾಗಿತ್ತು.
ಸದರಿ ನಿಯಮಬಾಹಿರ ಷರಾವನ್ನು ವಿರಹಿತ ಪಡಿಸುವಂತೆ ಕೋರಿ ಶ್ರೀ ಪ್ರಕಾಶ್ ನಾಯಕ್ ಅವರು ಸಂಘದ ಅಧ್ಯಕ್ಷರಿಗೆ ಮತ್ತು ಚುನಾವಣಾಧಿಕಾರಿಯವರಿಗೆ ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆ ದೊರಕದ ಕಾರಣ ಸದರಿ ಷರಾವನ್ನು ನಿಯಮಬಾಹಿರ ಎಂದು ಘೋಷಿಸಬೇಕೆಂದು ಕೋರಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಜೊತೆಗೆ ಚುನಾವಣೆಯಲ್ಲಿ ಮತದಾನ ಮಾಡುವ ಮತ್ತು ಸ್ಪರ್ಧಿಸುವ ಅವಕಾಶ ನೀಡುವಂತೆ ಚುನಾವಣಾಧಿಕಾರಿಗೆ ಆಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶ ನೀಡಬೇಕೆಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ನೌಕರರ ಸಂಘದ ಪರವಾಗಿ ಕೇವಿಯಟ್ ಅರ್ಜಿ ಸಲ್ಲಿಸಲಾಗಿತ್ತು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ವಾದಿಯ ವಿರುದ್ಧ ಸಂಘದ ಬೈಲಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಂಡಿಲ್ಲ. ಆಡಳಿತ ಮತ್ತು ಶಿಸ್ತು ಸಮಿತಿಯ ಮುಂದೆ ಹಾಜರಾಗಲು ವಾದಿಗೆ ನೋಟೀಸ್ ಜ್ಯಾರಿಯಾದ ದಾಖಲೆ ಹಾಜರುಪಡಿಸಿಲ್ಲ. ವಾದಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶ ನೀಡದೆ ಏಕಪಕ್ಷೀಯವಾಗಿ ಹೊರಡಿಸುವ ಆದೇಶ ನಿರಂಕುಶ ಆದೇಶವಾಗಿದೆ. ಚುನಾವಣಾ ಅಧಿಸೂಚನೆ ಪ್ರಕಾರ ಕರಡು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸದೇ ಇರುವುದು, ಅಂತಿಮ ಮತದಾರರ ಪಟ್ಟಿಯನ್ನು ಕ್ಲಪ್ತ ಕಾಲದಲ್ಲಿ ಅನುಮೋದಿಸದೆ ಇರುವ ಅಂಶಗಳನ್ನು ಪರಿಗಣಿಸಿದಾಗ ಪ್ರತಿವಾದಿಗಳು ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ನಡೆಸದೇ ಇರುವುದು ಕಂಡುಬರುತ್ತದೆ.
ವಾದಿಯು ತಂದಿರುವ ದಾವೆ ಮೇಲ್ನೋಟಕ್ಕೆ ಸಮ್ಮತವಾಗಿದೆ. ಅನುಕೂಲತೆಯ ಒಲವು ವಾದಿಯ ಪರ ಇದೆ. ಒಂದು ವೇಳೆ ಮಧ್ಯಂತರ ಆಜ್ಞೆ ಹೊರಡಿಸದೇ ಇದ್ದರೆ ವಾದಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ. ಮತದಾನದ ಆತನ ಸಂವಿಧಾನಾತ್ಮಕ ಹಕ್ಕನ್ನು ನಿರಾಕರಿಸಿದಂತಾಗುತ್ತದೆ ಎಂಬ ಅಭಿಪ್ರಾಯಕ್ಕೆ ಬಂದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ದಿನಾಂಕ 16.11.2024 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತದಾನ ಮಾಡಲು ವಾದಿ ಪ್ರಕಾಶ್ ನಾಯಕ್ ಅವರಿಗೆ ಅವಕಾಶ ನೀಡುವಂತೆ 1ನೇ ಪ್ರತಿವಾದಿ ದ.ಕ. ಜಿಲ್ಲಾ ಸಂಘ ಹಾಗೂ 2ನೇ ಪ್ರತಿವಾದಿ ದ.ಕ. ಜಿಲ್ಲಾ ಚುನಾವಣಾಧಿಕಾರಿಯವರಿಗೆ ಆಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶ ಹೊರಡಿಸಿದರು.
ವಾದಿ ಪರ ನ್ಯಾಯವಾದಿ ಅರವಿಂದ ವಿ. ವಾದಿಸಿದ್ದರು.