-->
20 ವರ್ಷ ವೇತನ ರಹಿತ ರಜೆ- ಸರ್ಕಾರಿ ನೌಕರನ ವಜಾ ಆದೇಶ ರದ್ದು: ಮಹತ್ವದ ಕಾರಣ ನೀಡಿ ಸುಪ್ರೀಂ ಕೋರ್ಟ್ ಆದೇಶ

20 ವರ್ಷ ವೇತನ ರಹಿತ ರಜೆ- ಸರ್ಕಾರಿ ನೌಕರನ ವಜಾ ಆದೇಶ ರದ್ದು: ಮಹತ್ವದ ಕಾರಣ ನೀಡಿ ಸುಪ್ರೀಂ ಕೋರ್ಟ್ ಆದೇಶ

20 ವರ್ಷ ವೇತನ ರಹಿತ ರಜೆ - ಸರ್ಕಾರಿ ನೌಕರನ ವಜಾ ಆದೇಶ ರದ್ದು: ಮಹತ್ವದ ಕಾರಣ ನೀಡಿ ಸುಪ್ರೀಂ ಕೋರ್ಟ್ ಆದೇಶ





ಸೇವಾ ನಿಯಮಗಳಡಿ ಸೂಚಿಸಲಾದ ಕಾರ್ಯವಿಧಾನವನ್ನು ಶಿಸ್ತು ವಿಚಾರಣೆಯಲ್ಲಿ ಅನುಸರಿಸಲಿಲ್ಲವೆಂಬ ಕಾರಣಕ್ಕೆ ಸರಕಾರಿ ನೌಕರನ ವಜಾ ಆದೇಶವನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್


ಸೇವಾ ನಿಯಮಾವಳಿಗಳಲ್ಲಿ ಒಂದು ಕಾರ್ಯವನ್ನು ನಿರ್ದಿಷ್ಟ ರೀತಿಯಲ್ಲಿ ಮಾಡಬೇಕೆಂದು ಶಾಸನವು ವಿಧಿಸಿದಾಗ ಸದರಿ ಕಾರ್ಯವಿಧಾನವನ್ನು ಅನುಸರಿಸದೇ ಇಲಾಖಾ ವಿಚಾರಣೆ ನಡೆಸಿ ನೌಕರನನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.


"ಕೇರಳ ಕೃಷಿ ವಿಶ್ವವಿದ್ಯಾಲಯ ಮತ್ತೊಬ್ಬರು Vs ಟಿ.ಪಿ‌ ಮುರಳಿ ಮತ್ತೊಬ್ಬರು" ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಪಿ. ನರಸಿಂಹ ಮತ್ತು ಶ್ರೀ ಪಂಕಜ್ ಮಿತ್ತಲ್ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ದಿನಾಂಕ 4.9.2024 ರಂದು ತೀರ್ಪು ನೀಡಿದೆ.





ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಶ್ರೀ ಟಿ.ಪಿ. ಮುರಳಿ ಎಂಬವರು ಕೇರಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮಾರ್ಚ್ 1988ರಲ್ಲಿ ನೇಮಕಗೊಂಡರು. 11 ವರ್ಷಗಳ ಸೇವೆಯ ನಂತರ ಅಮೆರಿಕಾದ ಪೆನ್ಸಿಲ್ವೇನಿಯದಲ್ಲಿನ ಸಮುದಾಯ ಕಾಲೇಜಿನಲ್ಲಿ ಉದ್ಯೋಗ ಕೈಗೊಳ್ಳಲು ಐದು ವರ್ಷಗಳ ನಾಲ್ಕು ಬ್ಲಾಕ್ ಅವಧಿಯಲ್ಲಿ ದಿನಾಂಕ 5.9.1999 ರಿಂದ 4.9.2019 ರ ವರೆಗೆ 20 ವರ್ಷಗಳ ರಜೆಯನ್ನು ಮಂಜೂರು ಮಾಡಿಸಿ, ಅಮೇರಿಕಾ ದೇಶದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದರು.


ಕೇರಳ ಸರಕಾರಿ ಸೇವಾ ನಿಯಮಗಳಲ್ಲಿ ವಿದೇಶದಲ್ಲಿ ಅಥವಾ ದೇಶದೊಳಗೆ ಉದ್ಯೋಗ ಪಡೆಯಲು ಅಥವಾ ಸಂಗಾತಿಯನ್ನು ಸೇರಲು ಸಂಪೂರ್ಣ ಸೇವಾವದಿಯಲ್ಲಿ 20 ವರ್ಷಗಳ ವರೆಗೆ ವೇತನ ರಹಿತ ರಜೆ ಪಡೆಯಲು ಅವಕಾಶವಿದೆ. ರಜೆ ಮುಗಿದ ತಕ್ಷಣ ಕರ್ತವ್ಯಕ್ಕೆ ಹಿಂತಿರುಗದೆ ಇದ್ದಲ್ಲಿ ಕೇರಳ ನಾಗರೀಕ ಸೇವೆಗಳು (ವರ್ಗಿಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳಡಿ ನಿಗದಿಪಡಿಸಿದ ಕಾರ್ಯ ವಿಧಾನವನ್ನು ಅನುಸರಿಸಿದ ನಂತರ ಅವರ ಸೇವೆಯನ್ನು ಕೊನೆಗೊಳಿಸಲಾಗುತ್ತದೆ. ಅಂತಹ ರಜೆ ಮಂಜೂರು ಮಾಡುವ ಪ್ರತಿಯೊಂದು ಆದೇಶದಲ್ಲಿ ಈ ಷರತ್ತು ಅಳವಡಿಸಲಾಗಿದೆ.


ಶ್ರೀ ಟಿ.ಪಿ. ಮುರಳಿಯವರು ದಿನಾಂಕ 5.9.2019 ರಂದು ಕರ್ತವ್ಯಕ್ಕೆ ಮರಳಬೇಕಾಗಿತ್ತು. ಆದರೆ ಅಮೆರಿಕದಲ್ಲಿ ಅವರು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದರು. ಅವರು ಇ-ಮೇಲ್ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ತಮ್ಮ ಅನಾರೋಗ್ಯದ ವಿಷಯವನ್ನು ತಿಳಿಸಿ ಕಾಯಿಲೆಯಿಂದ ಗುಣಮುಖನಾದ ಬಳಿಕ ಕರ್ತವ್ಯಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ 19 ಕಾರಣದಿಂದಾಗಿ ವಿಮಾನಯಾನದ ಸಂಪರ್ಕ ಕಡಿತಗೊಂಡಿತು.


ಜುಲೈ 2020 ರಲ್ಲಿ ಆರಂಭಗೊಂಡ ಮೊದಲ ವಂದೇ ಭಾರತ್ ವಿಮಾನದ ಮೂಲಕ ಭಾರತಕ್ಕೆ ಬರಲು ಅವರಿಗೆ ಸಾಧ್ಯವಾಯಿತು. ತಕ್ಷಣ ಕರ್ತವ್ಯಕ್ಕೆ ಮರು ಸೇರ್ಪಡೆಗೊಳಿಸಲು ವಿನಂತಿಸಿದರು. ಆದರೆ ಸಕ್ಷಮ ಪ್ರಾಧಿಕಾರ ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಲಿಲ್ಲ. ಬದಲಿಗೆ ದಿನಾಂಕ 5.9.2019 ರಿಂದ ಅನಧಿಕೃತ ಗೈರು ಹಾಜರಾಗಿದ್ದಾರೆ ಎಂಬ ದೋಷಾರೋಪಣೆಯೊಂದಿಗೆ ನೋಟಿಸನ್ನು ದಿನಾಂಕ 15-7-2020 ರಂದು ಜಾರಿಗೊಳಿಸಲಾಯಿತು. ಸದರಿ ಕಾರಣ ಕೇಳುವ ನೋಟಿಸಿಗೆ ಮುರಳಿ ಅವರು ನೀಡಿದ ಉತ್ತರ ತೃಪ್ತಿಕರವಲ್ಲವೆಂಬ ಕಾರಣಕ್ಕೆ ಔಪಚಾರಿಕ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು.


ಮೂರು ಸದಸ್ಯರ ವಿಚಾರಣಾ ಸಮಿತಿಯು 20 ವರ್ಷಗಳ ವೇತನ ರಹಿತ ರಜೆ ಅವಧಿಯನ್ನು ಪೂರ್ಣಗೊಳಿಸಿದ ಕೂಡಲೇ ಕರ್ತವ್ಯಕ್ಕೆ ಸೇರದೆ ರಜಾ ಮಂಜೂರಾತಿ ಶರತ್ತುಗಳನ್ನು ಟಿ.ಪಿ. ಮುರಳಿ ಅವರು ಉಲ್ಲಂಘಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದು ವರದಿಯನ್ನು ಸಲ್ಲಿಸಿತು. ವಿಚಾರಣಾ ಸಮಿತಿಯ ವರದಿಯನ್ನು ಪರಿಶೀಲಿಸಿದ ಉಪಕುಲಪತಿಗಳು ದಿನಾಂಕ 30.7.2021ರಂದು ಆದೇಶ ಹೊರಡಿಸಿ ಶ್ರೀ ಟಿ.ಪಿ. ಮುರಳಿ ಅವರನ್ನು ಸೇವೆಯಿಂದ ವಜಾಗೊಳಿಸಿದರು.


ಸದರಿ ಆದೇಶದಿಂದ ಭಾದಿತರಾದ ಶ್ರೀ ಟಿ.ಪಿ. ಮುರಳಿಯವರು ಕೇರಳ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದರು. ರಿಟ್ ಅರ್ಜಿದಾರರು ರಜೆ ಅವಧಿ ಮುಗಿದ ತಕ್ಷಣ ಕರ್ತವ್ಯಕ್ಕೆ ಹಾಜರಾಗದೆ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ನಿಷ್ಕರ್ಷೆಗೆ ಬಂದ ಏಕ ಸದಸ್ಯ ನ್ಯಾಯಪೀಠವು ದಿನಾಂಕ 21.12.2021 ರಂದು ತೀರ್ಪು ನೀಡಿ ರಿಟ್ ಅರ್ಜಿಯನ್ನು ವಜಾಗೊಳಿಸಿತು.


ಏಕ ಸದಸ್ಯ ನ್ಯಾಯಪೀಠದ ಆದೇಶದಿಂದ ಬಾಧಿತರಾದ ಶ್ರೀ ಟಿ.ಪಿ. ಮುರಳಿಯವರು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದರು. ಮೇಲ್ಮನವಿದಾರರ ಪರ ಈ ಕೆಳಗಿನವಾದ ಮಂಡಿಸಲಾಯಿತು.


ಮೇಲ್ಮನವಿದಾರರು ರಜೆ ಅವಧಿ ಮುಗಿದ ನಂತರ ತನ್ನ ಕರ್ತವ್ಯಕ್ಕೆ ಹಾಜರಾಗುವ ಇಂಗಿತವನ್ನು ವ್ಯಕ್ತಪಡಿಸಿ ಇಮೇಲ್ ಸಂದೇಶ ಕಳುಹಿಸಿದ್ದಾರೆ. ತೀವ್ರ ಅನಾರೋಗ್ಯ ಹಾಗೂ ಕೋವಿಡ್ 19 ಕಾರಣದಿಂದಾಗಿ ಪ್ರಯಾಣದ ಮೇಲೆ ನಿಬಂಧ ಹೇರಿದುದರಿಂದಾಗಿ ಅವರಿಗೆ ಭಾರತ ದೇಶಕ್ಕೆ ಪ್ರಯಾಣಿಸಲು ಅನನುಕೂಲವಾಯಿತು. ತನ್ನ ಅನಾರೋಗ್ಯದ ಕುರಿತು ವೈದ್ಯಕೀಯ ದಾಖಲೆಗಳನ್ನು ಹಾಜರುಪಡಿಸಿದ್ದಾರೆ. ತಪ್ಪಿತಸ್ಥ ನೌಕರರ ವಿರುದ್ಧ ಔಪಚಾರಿಕ ವಿಚಾರಣೆಯನ್ನು ನಡೆಸಲು ಮತ್ತು ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಾಕಷ್ಟು ಅಂಶಗಳಿವೆ ಹಾಗೂ ಹಾಗೂ ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹ ಪ್ರಕರಣ ಎಂಬುದು ಶಿಸ್ತು ಪ್ರಾಧಿಕಾರಕ್ಕೆ ಮನವರಿಕೆ ಆದಲ್ಲಿ ಮಾತ್ರ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಕ್ತ ಆದೇಶ ದಾಖಲಿಸಬೇಕು.


ಉಪಕುಲಪತಿಯವರು ತನಿಖಾ ಸಮಿತಿಯನ್ನು ನೇಮಿಸುವ ಮೊದಲು ಅಥವಾ ವರದಿಯನ್ನು ಅಂಗೀಕರಿಸುವ ಮೊದಲು ವಿಚಾರಣೆಗೆ ಯೋಗ್ಯ ಪ್ರಕರಣವೆಂದು ತಮಗೆ ಮನವರಿಕೆಯಾಗಿದೆ ಎಂಬ ಬಗ್ಗೆ ಸೂಕ್ತ ಆದೇಶ ದಾಖಲಿಸಿಲ್ಲ. ಒಂದು ಕಾರ್ಯವನ್ನು ನಿರ್ದಿಷ್ಟ ರೀತಿಯಲ್ಲಿ ಮಾಡುವಂತೆ ಶಾಸನವು ವಿಧಿಸಿದಾಗ ಅದನ್ನು ಆ ಶೈಲಿಯಲ್ಲಿಯೇ ಮಾಡಬೇಕು. ಇಲ್ಲವಾದಲ್ಲಿ ಮಾಡಬಾರದು ಎಂಬುದು ಕಾನೂನಿನ ಪ್ರಮುಖ ತತ್ವವಾಗಿದೆ. ಆದುದರಿಂದ ಇಲಾಖಾ ವಿಚಾರಣೆ ನಡೆಸುವ ಮೊದಲು ಶಿಸ್ತು ಪ್ರಾಧಿಕಾರವು ಇಲಾಖಾ ವಿಚಾರಣೆಗೆ ಸೂಕ್ತ ಪ್ರಕರಣವೆಂಬುವುದನ್ನು ಅವಗಾಹನಿಸುವುದು ಕಡ್ಡಾಯವಾಗಿದೆ. ಆದುದರಿಂದ ರಿಟ್ ಮೇಲ್ಮನವಿಯನ್ನು ಪುರಸ್ಕರಿಸಬೇಕೆಂದು ಪ್ರಾರ್ಥಿಸಿದರು.


ಎದುರುದಾರರಾದ ಕೇರಳ ಕೃಷಿ ವಿಶ್ವವಿದ್ಯಾಲಯದ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಒಬ್ಬ ಅಧಿಕಾರಿಗೆ ಅವನ ಸಂಪೂರ್ಣ ಸೇವಾ ಅವಧಿಯಲ್ಲಿ ಮಂಜೂರು ಮಾಡಬಹುದಾದ ಗರಿಷ್ಠ ರಜೆ ಅವಧಿ 20 ವರ್ಷಗಳಿಗೆ ಸೀಮಿತವಾಗಿರುತ್ತದೆ. ಮತ್ತು ಅಂತಹ ರಜೆ ಅವರ ನಿವೃತ್ತಿಯ ದಿನಾಂಕದಿಂದ 12 ತಿಂಗಳಿಗಿಂತ ಮೊದಲು ವಿಸ್ತರಿಸುವುದಿಲ್ಲ.


ನಿರಂತರವಾಗಿ ಒಟ್ಟು 20 ವರ್ಷಗಳವರೆಗೆ ವೇತನ ರಹಿತ ರಜೆಯನ್ನು ಪಡೆದ ಅಧಿಕಾರಿಯು ಅವಧಿ ಮುಗಿದ ತಕ್ಷಣ ಕರ್ತವ್ಯಕ್ಕೆ ಹಿಂದಿರುಗದಿದ್ದರೆ ಕಾರ್ಯವಿಧಾನ ಅನುಸರಿಸಿದ ನಂತರ ಅವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ. ಅಂತಹ ರಜೆಯನ್ನು ಮಂಜೂರು ಮಾಡುವ ಪ್ರತಿಯೊಂದು ಆದೇಶದಲ್ಲಿ ಈ ಷರತ್ತು ಅಳವಡಿಸಲಾಗಿದೆ. ಆದುದರಿಂದ ರಿಟ್ ಮೇಲ್ಮನವಿಯನ್ನು ವಜಾ ಗೊಳಿಸಬೇಕೆಂದು ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ವಿಭಾಗೀಯ ಪೀಠವು ರಿಟ್ ಮೇಲ್ಮನವಿದಾರರು ರಜೆಯ ಅವಧಿಯು ಮುಕ್ತಾಯವಾದ ನಂತರ ತಮ್ಮ ಕರ್ತವ್ಯವನ್ನು ಪುನರಾರಂಭಿಸುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಆದರೆ ತೀವ್ರ ಅನಾರೋಗ್ಯ ಮತ್ತು ಕೋವಿಡ್ 19 ರ ಕಾರಣದಿಂದ ಪ್ರಯಾಣದ ಮೇಲೆ ನಿರ್ಬಂಧ ಇದ್ದುದರಿಂದ ರಜಾ ಮಂಜೂರಾತಿ ಶರತ್ತು ಪಾಲಿಸಲು ಸಾಧ್ಯವಾಗಲಿಲ್ಲ.


ರಿಟ್ ಮೇಲ್ಮನವಿದಾರರ ಪ್ರಾಮಾಣಿಕ ಪ್ರಯತ್ನ ಅವರ ಇ-ಮೇಲ್ ಮತ್ತು ವೈದ್ಯಕೀಯ ದಾಖಲೆಗಳೊಂದಿಗೆ ಬಲಗೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ವಿಭಾಗಿಯ ನ್ಯಾಯಪೀಠವು ಮೇಲ್ಮನವಿಯನ್ನು ದಿನಾಂಕ 26.8.2022 ರಂದು ನೀಡಿದ ತೀರ್ಪಿನಲ್ಲಿ ಪುರಸ್ಕರಿಸಿ ಶ್ರೀ ಟಿ.ಪಿ‌ ಮುರಳಿಯವರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದು ಪಡಿಸಿತು.


ಕೇರಳ ಹೈಕೋರ್ಟಿನ ವಿಭಾಗಿಯ ಪೀಠದ ಆದೇಶದಿಂದ ಬಾಧಿತರಾದ ಕೇರಳ ಕೃಷಿ ವಿಶ್ವವಿದ್ಯಾಲಯವು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿ ದಾಖಲಿಸಿತು. ಶಿಸ್ತು ಪ್ರಾಧಿಕಾರವು ಯಾವುದೇ ತಪ್ಪಿತಸ್ಥ ನೌಕರನ ವಿರುದ್ಧ ಶಿಸ್ತು ಕ್ರಮದ ವಿಚಾರಣೆ ನಡೆಸುವ ಮೊದಲು ಪ್ರಾಥಮಿಕ ವಿಚಾರಣೆಗೆ ಅರ್ಹ ಪ್ರಕರಣವೆಂದು ದಾಖಲಿಸಬೇಕೆಂದು ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.


ಸೂಕ್ತ ಕಾರ್ಯವಿಧಾನ ಅನುಸರಿಸದ ಕಾರಣ ಏಕ ಸದಸ್ಯ ನ್ಯಾಯ ಪೀಠವು ದಿನಾಂಕ 21.12.2021 ರಂದು ನೀಡಿದ ಆದೇಶವನ್ನು ವಿಭಾಗೀಯ ನ್ಯಾಯಪೀಠವು ದಿನಾಂಕ 26.8.2022 ರ ತನ್ನ ಆದೇಶದಲ್ಲಿ ರದ್ದುಪಡಿಸಿತು.


ವಿಭಾಗೀಯ ಪೀಠವು ಅಳವಡಿಸಿಕೊಂಡ ತಾರ್ಕಿಕತೆಯಲ್ಲಿ ಯಾವುದೇ ನ್ಯೂನತೆ ಕಂಡುಬಂದಿಲ್ಲ. ಆದುದರಿಂದ ಸದರಿ ತೀರ್ಪು ಮತ್ತು ಆದೇಶದಲ್ಲಿ ಮಧ್ಯ ಪ್ರವೇಶದ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ 4.9.2024 ರಂದು ತೀರ್ಪು ಹೊರಡಿಸಿ ಕೇರಳ ವಿಶ್ವವಿದ್ಯಾಲಯವು ಸಲ್ಲಿಸಿದ ವಿಶೇಷ ಅನುಮತಿ ಅರ್ಜಿಯನ್ನು ವಜಾಗೊಳಿಸಿ ಕೇರಳ ಹೈಕೋರ್ಟಿನ ವಿಭಾಗೀಯ ಪೀಠವು ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು.


ಶ್ರೀ ಟಿ.ಪಿ. ಮುರಳಿ ಅವರು ಈಗಾಗಲೇ ನಿವೃತ್ತಿಯ ವಯಸ್ಸನ್ನು ಮೀರಿರುವುದರಿಂದ ಅವರನ್ನು ಸೇವೆಗೆ ಮರು ನಿಯುಕ್ತಿಗೊಳಿಸಲು ಸಾಧ್ಯವಿಲ್ಲ. ಆದುದರಿಂದ ಅವರಿಗೆ ಸಿಗತಕ್ಕಂಥ ಪಿಂಚಣಿ ಮತ್ತಿತರ ನಿವ್ರತ್ತಿ ಸೌಲಭ್ಯಗಳನ್ನು ನೀಡುವಂತೆ ಕೇರಳ ಕೃಷಿ ವಿಶ್ವವಿದ್ಯಾಲಯಕ್ಕೆ ಕೇರಳ ಹೈಕೋರ್ಟ್ ನ ವಿಭಾಗೀಯ ಪೀಠವು ನೀಡಿದ ನಿರ್ದೇಶನವನ್ನು ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠವು ಸ್ಥಿರೀಕರಿಸಿತು.





✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article