ಲಿಂಗತ್ವ ಬದಲಾವಣೆ ತಿದ್ದುಪಡಿ: ಮನವಿ ಪುರಸ್ಕರಿಸುವುದು ಜನನ ಮರಣ ನೋಂದಣಿ ರಿಜಿಸ್ಟ್ರಾರ್ ಕರ್ತವ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಲಿಂಗತ್ವ ಬದಲಾವಣೆ ತಿದ್ದುಪಡಿ: ಮನವಿ ಪುರಸ್ಕರಿಸುವುದು ಜನನ ಮರಣ ನೋಂದಣಿ ರಿಜಿಸ್ಟ್ರಾರ್ ಕರ್ತವ್ಯ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಜನನ ಮರಣ ಕಾಯಿದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ಸರ್ಕಾರ ಸೂಕ್ತ ತಿದ್ದುಪಡಿ ಮಾಡುವ ವರೆಗೆ ಲಿಂಗತ್ವ ಅಲ್ಪಸಂಖ್ಯಾತರ ಪರಿಷ್ಕರಿಸಲು ಮಾಡಲಾಧ ಅರ್ಜಿಗಳನ್ನು ಮಾನ್ಯ ಮಾಡುವುದು ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳ ಕರ್ತವ್ಯ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ 34 ವರ್ಷದ ಲಿಂಗತ್ವ ಅಲ್ಪಸಂಖ್ಯಾತರು ಒಬ್ಬರು ಸಲ್ಲಿಸಿದ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಪೀಠ ಈ ತೀರ್ಪು ಹೊರಡಿಸಿದೆ.
ತಮ್ಮ ಲಿಂಗತ್ವ ಬದಲಾಗಿರುವ ಬಗ್ಗೆ ಅದಕ್ಕೆ ಬೇಕಾದ ಪೂರಕ ದಾಖಲೆಗಳ ಜೊತೆ ಯಾರಾದರೂ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ತಿದ್ದುಪಡಿಗೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ನೋಂದಣಾಧಿಕಾರಿಗಳು ಸದ್ಯಕ್ಕೆ ಅಂತಹ ಮನವಿಯನ್ನು ಮಾನ್ಯ ಮಾಡಲು ಯಾವುದೇ ನಿಯಮಗಳಿಲ್ಲ. ಸಕ್ಷಮ ಪ್ರಾಧಿಕಾರವು ಜನನ ಮತ್ತು ಮರಣ ಕಾಯ್ದೆ 1969 ಅನ್ನು ಮೀರಿ ಯಾವುದೇ ರೀತಿಯ ಆದೇಶ ಹೊರಡಿಸಲು ಸಾಧ್ಯವಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯವಾಗಿದೆ ಎಂದು ನ್ಯಾಯ ಪೀಠ ತೀರ್ಪಿನಲ್ಲಿ ಹೇಳಿದೆ.
ಜನನ ಮತ್ತು ಮರಣ ಕಾಯಿದೆ 1969 ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡುವ ತನಕ ಲಿಂಗತ್ವ ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆ ಕಾಯ್ದೆ 2019ರ ಕಲಂ ಆರು ಮತ್ತು ಏಳರಡಿ ನೀಡುವ ಪ್ರಮಾಣ ಪತ್ರವನ್ನು ಒಳಗೊಂಡಂತೆ ಲಿಂಗತ್ವ ಅಲ್ಪಸಂಖ್ಯಾತರು ಸಲ್ಲಿಸುವ ಅರ್ಜಿಯನ್ನು ರಿಜಿಸ್ಟರ್ ಮಾನ್ಯ ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಜನನ ಮತ್ತು ಮರಣ ನೋಂದಣಿಯಲ್ಲಿ ಅರ್ಜಿದಾರರ ಕೋರಿಕೆಯಂತೆ ನಮೂದಿಸುವುದು ಹಿಂದಿನ ಮತ್ತು ಹಾಲಿ ಬಳಸಲಾಗುವ ಹೆಸರು ಹಾಗೂ ವಿವರ ಸೇರ್ಪಡೆ ಮಾಡಿ ಪರಿಷ್ಕೃತ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವುದು ಜನನ ಮರಣ ನೋಂದಣಾಧಿಕಾರಿಯವರ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.
ರಾಜ್ಯ ಕಾನೂನು ಆಯೋಗವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆಯನ್ನು ಅಧ್ಯಯನ ಮಾಡಿ ಜನನ ಮತ್ತು ಮರಣ ಕಾಯ್ದೆ 1969 ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿ ವಾಸ್ತವಾಂಶ ಆಧರಿಸಿ ಶೀಘ್ರವೇ ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ ಅನುಷ್ಠಾನಕ್ಕೆ ಸಲಹೆ ನೀಡಬೇಕು ಎಂದು ತೀರ್ಪು ಹೇಳಿದೆ. ಈ ತೀರ್ಪಿನ ಪ್ರತಿಯನ್ನು ರಿಜಿಸ್ಟರ್ ಜನರಲ್ ಅವರು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸಿಕೊಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ
ಪ್ರಕರಣದ ವಿವರ
1983ರಲ್ಲಿ ಅರ್ಜಿದಾರರು ಹುಟ್ಟಿದಾಗ ಜನ್ಮತಃ ಗಂಡು ಮಗುವಾಗಿದ್ದರು. 2007ರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದಾಗ ಪುರುಷನ ದೇಹದಲ್ಲಿ ಮಹಿಳೆಯರ ಭಾವನೆಗಳು ವ್ಯಕ್ತವಾಗುವ ಭಾವನಾತ್ಮಕ ಸಂಕಟಗಳಿಂದ ಬಳಲುತ್ತಿರುವ ಅಂಶ ಪತ್ತೆಯಾಗಿತ್ತು. ನಂತರ ಅರ್ಜಿದಾರರು ಲಿಂಗತ್ವ ಬದಲಾವಣೆಯ ಶಸ್ತ್ರ ಚಿಕಿತ್ಸೆಗೆ ಒಳಗಾದರು.
ಆ ಬಳಿಕ ಅವರು ಸ್ತ್ರೀಲಿಂಗದ ಗುರುತಿಸುವಿಕೆಯೊಂದಿಗೆ ಮಹಿಳೆಯಾಗಿ ಹೆಸರು ಬದಲಿಸಿಕೊಂಡಿದ್ದರು. ತಮ್ಮ ಆಧಾರ್ ಕಾರ್ಡ್, ವಾಹನ ಚಾಲನ ಪರವಾನಿಗೆ ಮತ್ತು ಪಾಸ್‌ಪೋರ್ಟ್ ಮುಂತಾದ ದಾಖಲೆಗಳಲ್ಲಿ ತಮ್ಮ ಹೆಸರು ಮತ್ತು ಲಿಂಗ ಬದಲಾವಣೆಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಅವರು ಮನವಿ ಸಲ್ಲಿಸಿದರು.
ಈ ಮನವಿಗೆ ಪ್ರತಿಯಾಗಿ ಆರೋಗ್ಯ ಅಧಿಕಾರಿ, ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಕಲಂ 15 ರ ಅಡಿ ಈಗಾಗಲೇ ನೀಡಿರುವ ಪ್ರಮಾಣ ಪತ್ರದಲ್ಲಿ ದೋಷಗಳಿದ್ದರೆ ಸರಿಪಡಿಸಬಹುದೇ ವಿನಃ ನೀವು ಕೋರಿರುವಂತೆ ಲಿಂಗ ಬದಲಾವಣೆ ಮಾಡಿ ಪ್ರಮಾಣಪತ್ರ ನೀಡಲಾಗದು ಎಂಬ ಹಿಂಬರಹವನ್ನು ನೀಡಿದರು.
ಈ ಹಿಂಬರಹವನ್ನು ಪ್ರಶ್ನಿಸಿ ಅರ್ಜಿದಾರರು ಮಾನ್ಯ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣ: 'X' Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್ WP 55559/2017 Dated 20-12-2024