ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸಬೇಕು: ಗ್ರಾಹಕ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ!
ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸಬೇಕು: ಗ್ರಾಹಕ ಆಯೋಗಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ!
ಗ್ರಾಹಕರ ನ್ಯಾಯಾಲಯಗಳಲ್ಲಿ ಪಕ್ಷಕಾರರನ್ನು ವಕೀಲರು ಮಾತ್ರವೇ ಪ್ರತಿನಿಧಿಸಬೇಕು. ಪಕ್ಷಕಾರರಿಂದ ನಿಯೋಜನೆಗೊಂಡ ಯಾವುದೇ ವ್ಯಕ್ತಿಯು ಪಕ್ಷಕಾರರನ್ನು ಪ್ರತಿನಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ನರೋಲಾ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ
ಸೂಕ್ತ ಅಧಿಕಾರಪತ್ರ ಇಲ್ಲದೆ ಮತ್ತು ಗ್ರಾಹಕರ ರಕ್ಷಣಾ ನಿಬಂಧನೆಗಳು ಮತ್ತು ವಕೀಲರ ಕಾಯಿದೆಗೆ ವಿರುದ್ಧವಾಗಿ ವಕೀಲೇತರರು ವ್ಯಾಪಕವಾಗಿ ಗ್ರಾಹಕರ ಆಯೋಗದಲ್ಲಿ ವಾದಿಸುತ್ತಿದ್ದಾರೆ ಎಂದು ಆಕ್ಷೇಪಿಸಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ದೆಹಲಿಯ ಎಲ್ಲಾ ಗ್ರಾಹಕ ಆಯೋಗಗಳು ಪಕ್ಷಕಾರರನ್ನು ವಕೀಲರು ಅಥವಾ ಅವರ ಏಜೆಂಟರು ಪ್ರತಿನಿಧಿ ಅಥವಾ ವಕೀಲೇತರರು ನಿಬಂಧನೆಗಳಿಗೆ ಅನುಗುಣವಾಗಿ ಪ್ರತಿನಿಧಿಸುವುದನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಪಕ್ಷಕಾರರು ವಕೀಲರಿಗೆ ಮಾತ್ರ ವ್ಯಾಜ್ಯದಲ್ಲಿ ತಮ್ಮನ್ನು ಪ್ರತಿನಿಧಿಸಲು ಅಧಿಕಾರ ನೀಡಬಹುದು. ಪಕ್ಷಕಾರರು ಸಹಿ ಹಾಕಿದ ಅಧಿಕೃತ ವಕಾಲತ್‌ನಾಮವನ್ನು ಹಾಜರುಪಡಿಸಿದರೆ ಮಾತ್ರ ಪ್ರಕರಣದಲ್ಲಿ ವಕೀಲರು ಹಾಜರಾಗಲು ಅನುಮತಿ ಇದೆ. ಅದನ್ನು ಹೊರತುಪಡಿಸಿ, ಪಕ್ಷಕಾರರು ನೀಡುವ ಅಧಿಕಾರ ಪತ್ರಗಳ ಆಧಾರದ ಮೇರೆಗೆ ವಕೀಲರಲ್ಲದವರು ಅಥವಾ ಅವರ ಏಜೆಂಟರುಗಳಿಗೆ ಹಾಜರಾಗಲು ಅನುಮತಿ ನೀಡುವ ಅಭ್ಯಾಸವನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಭಾರತೀಯ ವಕೀಲರ ಪರಿಷತ್ ಮತ್ತು ದೆಹಲಿ ವಕೀಲರ ಪರಿಷತ್ತಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದ್ದು, ನ್ಯಾಯಾಲಯದಲ್ಲಿ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಆದೇಶಿಸಿದೆ. ವಕೀಲರಲ್ಲದವರು ಹಾಜರಾಗುತ್ತಿರುವ ಬಾಕಿ ಇರುವ ಪ್ರಕರಣಗಳ ಪಟ್ಟಿ ಸಲ್ಲಿಸುವಂತೆ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ವಕೀಲರಲ್ಲದವರಿಗೆ ವಾದಿಸಲು ಅವಕಾಶ ನೀಡುವುದು ಪಕೀಲರ ಕಾಯಿದೆಯ ನಿಬಂಧನೆಗಳೊಂದಿಗೆ ಮೂಲಭೂತವಾಗಿ ಅಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣ: ಅನುಜ್ ಕುಮಾರ್ ಚೌಹಾಣ್ Vs ರಾಜ್ಯಪಾಲರು, ದೆಹಲಿ ಕೇಂದ್ರಾಡಳಿತ ಪ್ರದೇಶ ಮತ್ತಿತರರು
ದೆಹಲಿ ಹೈಕೋರ್ಟ್ WP(C) 17737/2024 Dated 23-12-2024
Non-Advocates Or Agents Cannot Be Permitted To Appear Before Consumer Courts Based On 'Authority Letters' Issued By Advocates: Delhi HC