-->
ವಜಾಗೊಂಡ ವೈದ್ಯನ ಮರುನಿಯುಕ್ತಿ- ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌: ವಿಆರ್‌ಎಸ್‌ಗೆ ಅರ್ಜಿ ಹಾಕಿ ಅನಧಿಕೃತ ಗೈರು ಹಾಜರಾಗಿ ವಜಾಗೊಂಡಿದ್ದ ವೈದ್ಯಾಧಿಕಾರಿ!

ವಜಾಗೊಂಡ ವೈದ್ಯನ ಮರುನಿಯುಕ್ತಿ- ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌: ವಿಆರ್‌ಎಸ್‌ಗೆ ಅರ್ಜಿ ಹಾಕಿ ಅನಧಿಕೃತ ಗೈರು ಹಾಜರಾಗಿ ವಜಾಗೊಂಡಿದ್ದ ವೈದ್ಯಾಧಿಕಾರಿ!

ವಜಾಗೊಂಡ ವೈದ್ಯನ ಮರುನಿಯುಕ್ತಿ- ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌: ವಿಆರ್‌ಎಸ್‌ಗೆ ಅರ್ಜಿ ಹಾಕಿ ಅನಧಿಕೃತ ಗೈರು ಹಾಜರಾಗಿ ವಜಾಗೊಂಡಿದ್ದ ವೈದ್ಯಾಧಿಕಾರಿ!





ಬರಹ: ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ, ಮಂಗಳೂರು


ಸ್ವಯಂ ನಿವೃತ್ತಿ ಅರ್ಜಿ ಸಲ್ಲಿಸಿದ ಬಳಿಕ ಅನಧಿಕೃತವಾಗಿ ಸೇವೆಗೆ ಗೈರು ಹಾಜರಾಗಿ ವಜಾಗೊಂಡ ವೈದ್ಯರನ್ನು ಮರು ನಿಯುಕ್ತಿಗೊಳಿಸಿದ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್


ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಸೇವೆಗೆ ಅನಧಿಕೃತವಾಗಿ ಗೈರು ಹಾಜರಾದ ಉತ್ತರ ಪ್ರದೇಶ ರಾಜ್ಯದ ಸರಕಾರಿ ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಮರು ನಿಯುಕ್ತಿಗೊಳಿಸಬೇಕೆಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಭಾಗಶಃ ರದ್ದುಪಡಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಉತ್ತರ ಪ್ರದೇಶ ರಾಜ್ಯ ವಿರುದ್ಧ ಸಂದೀಪ್ ಅಗರ್ವಾಲ್ ಮತ್ತಿತರ ವೈದ್ಯರು ಸಲ್ಲಿಸಿದ ಪ್ರತ್ಯೇಕ ರಿಟ್ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಭಯ್ ಶ್ರೀನಿವಾಸ್ ಓಕಾ ಮತ್ತು ಶ್ರೀ ಆಗಸ್ಟಿನ್ ಜಾರ್ಜ್ ಮಾಸಿಹ್ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು ದಿನಾಂಕ 19.12.2024 ರಂದು ಈ ಮಹತ್ವದ ತೀರ್ಪನ್ನು ನೀಡಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.


ಉತ್ತರ ಪ್ರದೇಶ ರಾಜ್ಯದ ನಾಗರಿಕ ಸೇವೆಗೆ ಸೇರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನೂರಾರು ವೈದ್ಯರು ಏಕಕಾಲದಲ್ಲಿ ರಾಜ್ಯಾದ್ಯಂತ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಸ್ವಯಂ ನಿವೃತ್ತಿ ಕೋರಿ ತಾವು ಸಲ್ಲಿಸಿದ ಅರ್ಜಿಯ ಕುರಿತು ಯಾವುದೇ ಆದೇಶ ಹೊರಡಿಸುವ ಮೊದಲೇ ರಿಟ್ ಅರ್ಜಿದಾರ ವೈದ್ಯರ ಸಹಿತ 400ಕ್ಕೂ ಅಧಿಕ ವೈದ್ಯರು ತಮ್ಮ ಸೇವೆಗೆ ಅನಧಿಕೃತವಾಗಿ ಗೈರು ಹಾಜರಾದರು. ವೈದ್ಯರುಗಳ ಸಾಮೂಹಿಕ ಅನಧಿಕೃತ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದ ಸರಕಾರವು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿತು. ಸರಕಾರದ ಸೂಚನೆಯನ್ನು ಪಾಲಿಸದ ವೈದ್ಯರ ವಿರುದ್ಧ ಸರಕಾರವು ಶಿಸ್ತು ಕ್ರಮಕ್ಕೆ ಮುಂದಾಯಿತು.


ದಿನಾಂಕ 3.5.2010 ರಂದು ಸಂವಿಧಾನದ 311 (2) ನೇ ವಿಧಿಯು ಎರಡನೆಯ ನಿಬಂಧನೆಯ ಶರತ್ತು (ಬಿ) ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಿ ರಿಟ್ ಅರ್ಜಿದಾರರ ಸಹಿತ ಅನಧಿಕೃತವಾಗಿ ಗೈರು ಹಾಜರಾದ ನಾಲ್ನೂರಕ್ಕೂ ಹೆಚ್ಚು ಇತರ ವೈದ್ಯರನ್ನು ಸೇವೆಯಿಂದ ವಜಾ ಗೊಳಿಸಲಾಯಿತು.


ಸರಕಾರದ ಆದೇಶದಿಂದ ಬಾಧಿತರಾದ ಕೆಲವು ವೈದ್ಯರು ಅಲಹಾಬಾದ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿದರು. ರಿಟ್ ಅರ್ಜಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು.


ನಿಯಮಾನುಸಾರ ಇಲಾಖಾ ವಿಚಾರಣೆ ನಡೆಸದೆ ಸಂವಿಧಾನದ 311(2) ನೇ ವಿಧಿಯು ಎರಡನೆಯ ನಿಬಂಧನೆಯ ಷರತ್ತು (ಬಿ) ಅಡಿಯಲ್ಲಿ ಪ್ರದತ್ತ ಅಧಿಕಾರ ಚಲಾಯಿಸಿ ಸರಕಾರ ನಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದು ಕಾನೂನು ನಡಿ ಊರ್ಜಿತವಲ್ಲ. ಅರ್ಜಿದಾರ ವೈದ್ಯರು ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ ಅರ್ಜಿಗಳ ಕುರಿತು ಸರಕಾರ ಕ್ಲಪ್ತಕಾಲದಲ್ಲಿ ಯಾವುದೇ ಆದೇಶ ನೀಡದೆ ಇರುವುದರಿಂದ ತಾವು ಅನಧಿಕೃತವಾಗಿ ಗೈರು ಹಾಜರಾಗಿದ್ದೇವೆ. ಸ್ವಯಂ ನಿವೃತ್ತಿ ಅರ್ಜಿ ಕುರಿತಾದ ಸರಕಾರದ ನಿರ್ಧಾರವನ್ನು ತಮಗೆ ತಿಳಿಸಿಲ್ಲ. ಆದುದರಿಂದ ತಮ್ಮನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಮರುನಿಯುಕ್ತಿ ಮಾಡಬೇಕಾಗಿ ಪ್ರಾರ್ಥಿಸಿದರು.


ಉತ್ತರ ಪ್ರದೇಶ ರಾಜ್ಯ ಸರಕಾರದ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಸದರಿ ಅರ್ಜಿಯು ಪುರಸ್ಕೃತವಾಗಿದೆಯೇ ಅಥವಾ ತಿರಸ್ಕೃತವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಮೊದಲೇ ತಮ್ಮ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ರಾಜ್ಯಾದ್ಯಂತ ಸಾವಿರಾರು ವೈದ್ಯರು ಏಕಕಾಲದಲ್ಲಿ ಗೈರುಹಾಜರಾಗಿರುವುದನ್ನು ಗಮನಿಸಿದರೆ ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ಧ ನಿಯಮಾನಸಾರ ಶಿಸ್ತು ಕ್ರಮದ ವಿಚಾರಣೆ ನಡೆಸುವುದು ಅಪ್ರಾಯೋಗಿಕ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದುದರಿಂದ ರಿಟ್ ಅರ್ಜಿಯನ್ನು ವಜಾ ಗೊಳಿಸಬೇಕೆಂದು ಪ್ರಾರ್ಥಿಸಿದರು.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಅಲಹಾಬಾದ್ ಹೈಕೋರ್ಟ್ ದಿನಾಂಕ 17.4.2014 ರ ತೀರ್ಪಿನ ಮೂಲಕ ರಿಟ್ ಅರ್ಜಿಯನ್ನು ಪುರಸ್ಕರಿಸಿತು. ಅರ್ಜಿದಾರ ವೈದ್ಯರನ್ನು ಸೇವೆಯಿಂದ ವಜಾ ಗೊಳಿಸಿದ ಆದೇಶವನ್ನು ರದ್ದುಪಡಿಸಿ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಸೇವೆಗೆ ಮರುನಿಯುಕ್ತಿಗೊಳಿಸಬೇಕೆಂದು ಆದೇಶ ಹೊರಡಿಸಿತು ಹಾಗೂ ಸ್ವಯಂ ನಿವೃತ್ತಿ ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸರಕಾರಕ್ಕೆ ನಿರ್ದೇಶಿಸಿತು.


ಅಲಹಾಬಾದ್ ಹೈಕೋರ್ಟಿನ ಆದೇಶದಿಂದ ಬಾಧಿತರಾದ ಉತ್ತರ ಪ್ರದೇಶ ರಾಜ್ಯ ಸರ್ಕಾರವು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿದಾರರ ಪರ ಈ ಕೆಳಗಿನ ವಾದ ಮಂಡಿಸಲಾಯಿತು ಎದುರುದಾರರ ವೈದ್ಯರು ಇತರ ನೂರಾರು ವೈದ್ಯರುಗಳ ಜೊತೆ ಎರಡರಿಂದ ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಸಾವಿರಾರು ವೈದ್ಯರು ಸರಕಾರದ ಆದೇಶವನ್ನು ಧಿಕ್ಕರಿಸಿ ಕರ್ತವ್ಯಕ್ಕೆ ಹಾಜರಾಗದೆ ಅನಧಿಕೃತವಾಗಿರುವುದನ್ನು ಗಮನಿಸಿದರೆ ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ಧ ಸಾಮೂಹಿಕವಾಗಿ ಶಿಸ್ತು ತನಿಖೆ ನಡೆಸುವುದು ಕಾರ್ಯ ಸಾಧು ಅಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮೂಲಭೂತವಾಗಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಹಲವಾರು ಕುಂದು ಕೊರತೆಗಳಿದ್ದವು. ಅಂತಹ ಅರ್ಜಿಗಳಲ್ಲಿ ಎದುರುದಾರರ ನಡವಳಿಕೆಯನ್ನು ಗಮನಿಸಿದಾಗ ಮರು ನಿಯುಕ್ತಿ ಆದೇಶವನ್ನು ಹೊರಡಿಸಲು ಕಾನೂನಿನಡಿ ಅವಕಾಶವಿಲ್ಲ. ಆದುದರಿಂದ ಹೈಕೋರ್ಟಿನ ಆಕ್ಷೇಪಾರ್ಹ ಆದೇಶಗಳು ಕಾನೂನಿನಲ್ಲಿ ಊರ್ಜಿತವಲ್ಲ.


ಎದುರುದಾರ ವೈದ್ಯರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ವಿನಾಕಾರಣ ದೀರ್ಘಕಾಲದವರೆಗೆ ಬಾಕಿ ಇರಿಸಿದ್ದಾರೆ ಸದರಿ ಅರ್ಜಿಗಳ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಎದುರುದಾರರಿಗೆ ತಿಳಿಸಿಲ್ಲ. ಆದುದರಿಂದ ಸೇವೆಯಿಂದ ವಜಾಗೊಳಿಸಿದ ಆದೇಶ ಕಾನೂನುಬಾಹಿರವಾಗಿದೆ.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯ ಪೀಠವು ಸ್ವಯಂ ನಿವೃತ್ತಿಯ ಅರ್ಜಿಗಳನ್ನು ಸೂಕ್ತ ಸಮಯದಲ್ಲಿ ನಿರ್ಧರಿಸಿಲ್ಲ ಎಂಬುದು ಕಂಡುಬಂದಾಗ ಕಾನೂನಿನ ಪ್ರಕಾರ ಪರಿಹಾರಗಳನ್ನು ಪಡೆಯುವ ಬದಲು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ ವೈದ್ಯರ ನಡವಳಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ‌. ಅಂತೆಯೇ ಸ್ವಯಂ ನಿವೃತ್ತಿ ಅರ್ಜಿಗಳನ್ನು ಕ್ಲಪ್ತಕಾಲದಲ್ಲಿ ವಿಲೇವಾರಿ ಮಾಡದ ಸರಕಾರದ ನಡವಳಿಕೆಯನ್ನು ಬೆಂಬಲಿಸಲಾಗುವುದಿಲ್ಲ. ಆದುದರಿಂದ ಸ್ವಯಂ ನಿವೃತ್ತಿಯ ಅರ್ಜಿಗಳನ್ನು ನಿರ್ಧರಿಸಲು ಮೇಲ್ಮನವಿದಾರರಿಗೆ ನಿರ್ದೇಶಿಸುವುದು ಅತ್ಯಂತ ಸೂಕ್ತವಾದ ಆದೇಶವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.


ಅನಧಿಕೃತವಾಗಿ ಹಲವಾರು ವರ್ಷಗಳವರೆಗೆ ಕರ್ತವ್ಯಕ್ಕೆ ಗೈರು ಹಾಜರಾದ ವೈದ್ಯರ ನಡವಳಿಕೆಯನ್ನು ಪರಿಗಣಿಸಿ ಮರುಸ್ಥಾಪನೆಯ ಆದೇಶವು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬಂದು ಅಲಹಾಬಾದ್ ಹೈಕೋರ್ಟಿನ ಸದರಿ ಆದೇಶವನ್ನು ರದ್ದುಪಡಿಸಿತು. ದಿನಾಂಕ 3.5.2010 ರಂದು ವೈದ್ಯರನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ರದ್ದುಪಡಿಸಿ ಸದರಿ ದಿನಾಂಕದಿಂದ ಜಾರಿಗೆ ಬರುವಂತೆ ಸ್ವಯಂ ನಿವೃತ್ತಿ ಅರ್ಜಿಯನ್ನು ಸ್ವೀಕರಿಸಲು ನಿರ್ದೇಶಿಸಿತು. ಸದರಿ ದಿನಾಂಕದಿಂದ ಅನ್ವಯವಾಗುವಂತೆ ಪಿಂಚಣಿ ಸೌಲಭ್ಯಗಳನ್ನು ನೀಡಲು ನಿರ್ದೇಶಿಸಿತು.


✍️ ಬರಹ: ಶ್ರೀ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ, ಮಂಗಳೂರು

Ads on article

Advertise in articles 1

advertising articles 2

Advertise under the article