ಬೀದರ್ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹೈಕೋರ್ಟ್ ತಡೆ: ದ.ಕ. ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೂ ಮರುಚುನಾವಣೆ ಖಚಿತ
ಬೀದರ್ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಹೈಕೋರ್ಟ್ ತಡೆ: ದ.ಕ. ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೂ ಮರುಚುನಾವಣೆ ಖಚಿತ
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಾಖೆಗೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ದಿನಾಂಕ 4.12.2024 ರಂದು ನಿಗದಿಯಾದ ಬೀದರ್ ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ನ ಗುಲ್ಬರ್ಗ ಪೀಠವು ದಿನಾಂಕ 3.12.2024 ರಂದು ತಡೆಯಾಜ್ಞೆ ನೀಡಿದೆ.
ಗೌರವಾನ್ವಿತ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ. ಮಾನ್ಯ ಹೈಕೋರ್ಟ್ ಹೊರಡಿಸಿದ ಆದೇಶದನ್ವಯ ಇಂದು ನಡೆಯಬೇಕಿದ್ದ ಬೀದರ್ ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆ ನಡೆದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮುಲ್ಕಿ ತಾಲೂಕು ಸರಕಾರಿ ನೌಕರರ ಸಂಘದ ಶಾಖೆಯ ಪದಾಧಿಕಾರಿಗಳ ಚುನಾವಣೆಗೆ ಮೂಡಬಿದ್ರೆಯ ಸಿವಿಲ್ ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರಿಂದ ಮುಲ್ಕಿ ತಾಲೂಕು ಶಾಖೆಯ ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ.
ಹಾಗಾಗಿ ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಸಿದಲ್ಲಿ ಸದರಿ ಚುನಾವಣೆ ಮಾನ್ಯ ಕರ್ನಾಟಕ ಹೈಕೋರ್ಟ್ ನ ಗುಲ್ಬರ್ಗಾ ನ್ಯಾಯಪೀಠವು ನೀಡಿದ ಆದೇಶದನ್ವಯ ಅಸಿಂಧು ಆಗಿರುತ್ತದೆ.
ನ್ಯಾಯಾಂಗ ಇಲಾಖೆಯ ನೌಕರರು ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ತಮ್ಮ ಇಲಾಖೆಯಿಂದ ನಿರ್ದೇಶಕರುಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವಂತೆ ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ದಿನಾಂಕ 7.11.2024 ರಂದು ಚುನಾವಣೆ ನಡೆಸಲು ಆಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶ ನೀಡಿದ್ದರೂ ಆದೇಶವನ್ನು ಚುನಾವಣಾಧಿಕಾರಿ ಆದೇಶವನ್ನು ಪಾಲಿಸದ ಕಾರಣ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಲಾಗಿತ್ತು.
ದಿನಾಂಕ 11.11.2024 ರಂದು ಚುನಾವಣೆ ನಡೆಸುವಂತೆ ಮಾನ್ಯ ನ್ಯಾಯಾಲಯವು ಸ್ಪಷ್ಟ ಆದೇಶ ನೀಡಿದ್ದರೂ ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಉಳಿದ 11 ಇಲಾಖೆಗಳಿಗೆ ದಿನಾಂಕ 16.11.2024 ರಂದು ಚುನಾವಣೆ ನಡೆಸಲಾಯಿತು. ಜಿಲ್ಲಾ ಸಂಘದಲ್ಲಿ ಎಲ್ಲಾ ಇಲಾಖೆಗಳ ನಿರ್ದೇಶಕರುಗಳ ಉಪಸ್ಥಿತಿ ಅನಿವಾರ್ಯ. ದಿನಾಂಕ 11.11.2024 ರ ಆದೇಶ ಊರ್ಜಿತದಲ್ಲಿರುವಾಗಲೇ ಸದರಿ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ನಡೆಸಿರುವ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಚುನಾವಣೆ ಕಾನೂನಿನಡಿ ಊರ್ಜಿತವಲ್ಲ.
ಮೇಲ್ಕಾಣಿಸಿದ ಅಂಶಗಳನ್ನು ಪರಿಗಣಿಸಿದಾಗ ದಿನಾಂಕ 4.12.2024ರಂದು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯು ಅಸಿಂಧುವಾಗಿರುತ್ತದೆ. ಹಾಗಾಗಿ ದ.ಕ.ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮರು ಚುನಾವಣೆ ನಡೆಯುವುದು ನಿಶ್ಚಿತವಾಗಿದೆ.