ಭ್ರಷ್ಟಾಚಾರದಿಂದ ಆಸ್ತಿ ಸಂಪಾದಿಸಿದ್ದ ಜಡ್ಜ್: ಕಡ್ಡಾಯ ನಿವೃತ್ತಿ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್!
ಭ್ರಷ್ಟಾಚಾರದಿಂದ ಆಸ್ತಿ ಸಂಪಾದಿಸಿದ್ದ ಜಡ್ಜ್: ಕಡ್ಡಾಯ ನಿವೃತ್ತಿ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್!
ಭ್ರಷ್ಟಾಚಾರದ ಮೂಲಕ ಅಪಾರ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿ ಹಿಡಿದಿದೆ.
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗಿಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಆಸ್ತಿಯ ಖರೀದಿ, ಮಾರಾಟ ಅಥವಾ ವರ್ಗಾವಣೆಗೆ ಹೈಕೋರ್ಟಿನ ಆಡಳಿತಾಂಗ ನೀಡಿರುವ ಅನುಮತಿ ಆಡಳಿತಾತ್ಮಕ ವ್ಯವಹಾರದ ಅಸಲಿತನದ ಬಗ್ಗೆ ವಿಚಾರಣೆ ನಡೆಸದಂತೆ ಶಿಸ್ತು ಪ್ರಾಧಿಕಾರಕ್ಕೆ ತಡೆ ನೀಡದು ಎಂದು ನ್ಯಾಯಪೀಠ ಹೇಳಿದೆ.
ಸರಕಾರಿ ನೌಕರ ಸಕ್ರಮ ಪ್ರಾಧಿಕಾರದ ಅರಿವಿಗೆ ತಾರದೆ ಸ್ಥಿರಾಸ್ತಿ ಸ್ವಾಧೀನ ಪಡಿಸಿಕೊಳ್ಳುವುದನ್ನು ನೌಕರರ ನಡವಳಿ ನಿಯಮಾವಳಿ 1965 ನಿಷೇಧಿಸುತ್ತದೆ. ಹಾಗೆ ಅನುಮತಿ ನೀಡುವಾಗ ತನ್ನ ಅರಿವಿಗೆ ಸಂಬಂಧಿಸಿದಂತೆ ಮಾತ್ರ ಪರಿಶೀಲಿಸುತ್ತದೆಯೇ ವಿನಹ ಉದ್ಯೋಗಿಯ ನೈಜ ಸಂಪನ್ಮೂಲ ಅಥವಾ ತನ್ನ ಪ್ರಭಾವದ ಮೂಸೆಯಲ್ಲಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟಿನ ಪೂರ್ಣ ನ್ಯಾಯಾಲಯ 2020ರಲ್ಲಿ ಈ ಆರೋಪಿ ನ್ಯಾಯಾಂಗ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿತ್ತು. ಹೀಗಾಗಿ ನ್ಯಾಯಾಧೀಶ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತಾಗಿತ್ತು. ಶಿಫಾರಸನ್ನು ನ್ಯಾಯಾಂಗ ಅಧಿಕಾರಿ 2021ರಲ್ಲಿ ಪ್ರಶ್ನಿಸಿದ್ದರು.
ಆರೋಪಿ ಜಿಲ್ಲಾ ನ್ಯಾಯಾಧೀಶರು ಭ್ರಷ್ಟಾಚಾರ ಎಸಗಿ ಈ ಹಿಂದೆ ಗುರುಗ್ರಾಮ, ಫರಿದಾಬಾದ್ ಮತ್ತು ಪಂಚಕುಲದಲ್ಲಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಅನೇಕ ಆಸ್ತಿ ಸಂಪಾದಿಸಿದ ಆರೋಪ ಎದುರಿಸುತ್ತಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಅವರು ಸೇವೆಗೆ ಸೇರ್ಪಡೆಯಾಗುವ ವೇಳೆ ಹರಿಯಾಣದಲ್ಲಿ ಮೋಹನ ಗ್ರಾಮದಲ್ಲಿ ಚಿಕ್ಕ ವಸತಿ ಆಸ್ತಿಯ ಅರ್ಧ ಭಾಗವಷ್ಟೇ ಅವರ ಹೆಸರಿನಲ್ಲಿ ಇತ್ತು.
ನ್ಯಾಯಾಧೀಶರ ಅತ್ತೆ 1998ರಲ್ಲಿ ಆಸ್ತಿ ಖರೀದಿಸಿ ಆರು ತಿಂಗಳ ಒಳಗೆ ನ್ಯಾಯಾಧೀಶರ ಪತ್ನಿಗೆ ಉಯಿಲು (ವಿಲ್) ನೀಡಿರುವುದು ವಿಚಾರಣಾ ವರದಿಯಿಂದ ಬಹಿರಂಗವಾಗಿತ್ತು. ಈ ನಿರ್ದಿಷ್ಟ ಆರೋಪದಲ್ಲೂ, ಆಸ್ತಿ ಖರೀದಿಸಲು ತನ್ನ ಅತ್ತಿಗೆ ಸಾಕಷ್ಟು ಆದಾಯದ ಮೂಲಗಳಿವೆ ಎಂಬುದನ್ನು ನ್ಯಾಯಾಧೀಶರು ಸಾಬೀತುಪಡಿಸಲು ವಿಫಲರಾಗಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿತು.
ನ್ಯಾಯಾಧೀಶರ ತಂದೆ ಪಂಚಕುಲದಲ್ಲಿ ಬೃಹತ್ ಆಸ್ತಿ ಖರೀದಿಸಿದ್ದರು. ಆದರೆ, ಅವರ ಆದಾಯ ತೆರಿಗೆ ದಾಖಲೆಗೂ ಆಗ ಕೈಯಲ್ಲಿದ್ದ ಹಣಕ್ಕೂ ಸಾಕಷ್ಟು ವ್ಯತ್ಯಾಸ ಇರುವುದಾಗಿ ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ. ಜೊತೆಗೆ ಮಾರುಕಟ್ಟೆ ಮೌಲ್ಯ ಹೆಚ್ಚಿದ್ದರೂ ಪಂಚಕುಲದಲ್ಲಿ ನ್ಯಾಯಾಧೀಶರ ಪತ್ನಿ ಅಲ್ಪ ಮೊತ್ತಕ್ಕೆ ಆಸ್ತಿಯನ್ನು ಖರೀದಿಸಿದ್ದರು.
ಈ ಎಲ್ಲ ವ್ಯವಹಾರಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು ಶಿಸ್ತು ಪ್ರಾಧಿಕಾರ ನೀಡಿರುವ ಅಭಿಪ್ರಾಯದಲ್ಲಿ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿತು.
ಪ್ರಕರಣ: ವೇದ್‌ಪಾಲ್ ಗುಪ್ತಾ Vs ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮತ್ತಿತರರು
(ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್)