ಕನ್ನಡದಲ್ಲೇ ತೀರ್ಪು: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕರ್ನಾಟಕ ಹೈಕೋರ್ಟ್
ಕನ್ನಡದಲ್ಲೇ ತೀರ್ಪು: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕರ್ನಾಟಕ ಹೈಕೋರ್ಟ್
ಕನ್ನಡದಲ್ಲೇ ತೀರ್ಪನ್ನು ಓದುವ ಮೂಲಕ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಹೊಸ ಇತಿಹಾಸ ಬರೆದಿದೆ. ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಅಷ್ಟೇ ಅಲ್ಲ, ಸಾಂವಿಧಾನಿಕ ಸಂಸ್ಥೆಗಳಲ್ಲೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು ಎಂದು ನ್ಯಾಯಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.
ತುಮಕೂರಿನ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಸಲ್ಲಿಸಿದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ.
ನಾವು ಹೊಸ ಟ್ರೆಂಡ್ ಆರಂಭಿಸಲು ನಿರ್ಧರಿಸಿದ್ದೇವೆ. ಈಗ ನಮ್ಮೆಲ್ಲ ತೀರ್ಪುಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕವಾಗಿ ಆದೇಶ ಬರೆಯಲಾಗಿದೆ. ಇದು ತರ್ಜುಮೆಯಲ್ಲ. ನಾವೇ ಕನ್ನಡದಲ್ಲಿ ಬರೆದಿದ್ದೇವೆ. ಕವಿ ರವೀಂದ್ರ ನಾಥ್ ಟ್ಯಾಗೋರ್ ಅವರು ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ ಪದ್ಯ ಬರೆಯುತ್ತಿದ್ದ ಹಾಗೆ... ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ವಿವರಿಸಿದರು.