ಸಾಮಾಜಿಕ ಮಾಧ್ಯಮದಿಂದ ನ್ಯಾಯಾಧೀಶರು ದೂರ ಇರಬೇಕು; ಸಂತರಂತೆ ಇರಬೇಕು- ಜಡ್ಜ್‌ಗಳ ವಜಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಮತ
ಸಾಮಾಜಿಕ ಮಾಧ್ಯಮದಿಂದ ನ್ಯಾಯಾಧೀಶರು ದೂರ ಇರಬೇಕು; ಸಂತರಂತೆ ಇರಬೇಕು- ಜಡ್ಜ್‌ಗಳ ವಜಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಮತ
ನ್ಯಾಯಾಧೀಶರು ಸನ್ಯಾಸಿಗಳಂತೆ ಬದುಕಬೇಕು, ಕುದುರೆಗಳಂತೆ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟಿನಿಂದ ಇಬ್ಬರು ಮಹಿಳಾ ನ್ಯಾಯಾಂಗ ಅಧಿಕಾರಿಗಳನ್ನು ವಜಾಗೊಳಿಸಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎಂ ಕೋಟೀಶ್ವರ ಸಿಂಗ್ ಅವರಿದ್ದ ವಿಭಾಗಿಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಾಂಗದಲ್ಲಿ ಪ್ರದರ್ಶನಕ್ಕೆ ಅವಕಾಶವಿಲ್ಲ, ನ್ಯಾಯಾಂಗ ಅಧಿಕಾರಿಗಳು ಫೇಸ್ ಬುಕ್ ಸಹಿತ ಸಾಮಾಜಿಕ ಜಾಲತಾಣಗಳನ್ನು ಬಳಸಬಾರದು. ಸಾಮಾಜಿಕ ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳಬೇಕು, ಒಂದು ರೀತಿಯಲ್ಲಿ ಸಂತನಂತೆ ಬದುಕಬೇಕು ಮತ್ತು ಕುದುರೆಯಂತೆ ದುಡಿಯಬೇಕು. ನ್ಯಾಯಾಂಗ ಅಧಿಕಾರಿಗಳು ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದೆ
2017 ಮತ್ತು 2018 ಮಧ್ಯೆ ಕ್ರಮವಾಗಿ ಮಧ್ಯಪ್ರದೇಶದ ನ್ಯಾಯಾಂಗ ಸೇವೆಗೆ ಸೇರ್ಪಡೆಗೊಂಡ ಇಬ್ಬರು ಸಿವಿಲ್ ನ್ಯಾಯಾಧೀಶರಾದ ಅದಿತಿ ಕುಮಾರ್ ಶರ್ಮಾ ಮತ್ತು ಸರಿತಾ ಚೌಧರಿ ಅವರನ್ನು ವಜಾ ಗೊಳಿಸುವುದಕ್ಕೆ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
2023ರಲ್ಲಿ ಒಟ್ಟು 6 ಮಹಿಳಾ ನ್ಯಾಯಾಂಗ ಅಧಿಕಾರಿಗಳನ್ನು ವಜಾಗೊಳಿಸಲಾಗಿತ್ತು. ಈ ಆದೇಶಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಹಸಿರು ನಿಶಾನೆ ನೀಡಿತ್ತು. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ತಳೆದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಮಧ್ಯಪ್ರದೇಶ ಹೈಕೋರ್ಟಿಗೆ ತಿಳಿಸಿತ್ತು.
ಸುಪ್ರೀಂ ಕೋರ್ಟ್ ಮನವಿಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನಾಲ್ವರು ಅಧಿಕಾರಿಗಳ ವಜಾ ಗೊಳಿಸಿದ ತನ್ನ ತೀರ್ಪನ್ನು ಹಿಂಪಡೆದಿತ್ತು. ಆದರೆ, ಈ ಇಬ್ಬರು ಅಧಿಕಾರಿಗಳ ವಿರುದ್ಧದ ವಜಾ ಆದೇಶವನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿತ್ತು.
ವಜಾಗೊಂಡ ಮಹಿಳಾ ನ್ಯಾಯಾಧೀಶರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ನ್ಯಾಯಾಲಯಗಳ ತೀರ್ಪಿನ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ ಎಂದು ಹಿರಿಯ ವಕೀಲ ಗೌರವ್ ಅಗರ್ವಾಲ್ ಪೀಠಕ್ಕೆ ತಿಳಿಸಿದಾಗ ಸುಪ್ರೀಂಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.