ಹೈಕೋರ್ಟ್ ನಾಲ್ವರು ನ್ಯಾಯಮೂರ್ತಿಗಳ ಖಾಯಂ ಪ್ರಸ್ತಾಪಕ್ಕೆ ಸುಪ್ರೀಂ ಕೊಲೀಜಿಯಂ ಅನುಮೋದನೆ
ಹೈಕೋರ್ಟ್ ನಾಲ್ವರು ನ್ಯಾಯಮೂರ್ತಿಗಳ ಖಾಯಂ ಪ್ರಸ್ತಾಪಕ್ಕೆ ಸುಪ್ರೀಂ ಕೊಲೀಜಿಯಂ ಅನುಮೋದನೆ
ಕರ್ನಾಟಕ ಹೈಕೋರ್ಟ್ ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂಗೊಳಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ಕೊಲೀಜಿಯಂ ಅನುಮೋದನೆ ನೀಡಿದೆ.
ಕರ್ನಾಟಕ ಹೈಕೋರ್ಟ್ನ ರಾಮಚಂದ್ರ ಡಿ. ಹುದ್ದಾರ್, ವೆಂಕಟೇಶ್ ನಾಯ್ಕ್ ಟಿ. ಮತ್ತು ವಿಜಯ್ ಕುಮಾರ್ ಎ ಪಾಟೀಲ್ ಅವರನ್ನು ಖಾಯಂಗೊಳಿಸುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ಕೊಲೀಜಿಯಂ ಸಮ್ಮತಿಸಿದೆ.
ಇದೇ ವೇಳೆ, 2025ರ ಫೆಬ್ರವರಿ 1ರಂದು ಖಾಲಿಯಾಗುವ ಹುದ್ದೆಗೆ ಹಾಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿರುವ ರಾಜೇಶ್ ರೈ ಕೆ ಅವರನ್ನು ಖಾಯಂಗೊಳಿಸುವ ಪ್ರಸ್ತಾಪಕ್ಕೆ ಕೊಲೀಜಿಯಂ ಅನುಮೋದನೆ ನೀಡಿದೆ. ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರು 2025ರ ಫೆಬ್ರವರಿ 1ರಂದು ಸೇವಾ ನಿವೃತ್ತಿ ಹೊಂದಲಿದ್ಧಾರೆ.
ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಡಿ. ಹುದ್ದಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ವೆಂಕಟೇಶ್ ನಾಯ್ಕ್ ಟಿ. ಅವರನ್ನು 2023ರ ಜನವರಿ 21ರಂದು ಮತ್ತು ರಾಜ್ಯ ಸರ್ಕಾರದ ವಕೀಲರಾದ ವಿಜಯ್ ಕುಮಾರ್ ಎ ಪಾಟೀಲ್ ಮತ್ತು ವಕೀಲರಾದ ರಾಜೇಶ್ ರೈ ಕಲ್ಲಂಗಳ ಅವರನ್ನು 2023ರ ಫೆಬ್ರವರಿ 6ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.
ಕರ್ನಾಟಕ ಹೈಕೋರ್ಟ್ನಲ್ಲಿ ಸದ್ಯ 49 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಐವರು ಹೆಚ್ಚುವರಿ ನ್ಯಾಯಮೂರ್ತಿಗಳಾಗಿರುತ್ತಾರೆ.