ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣ: ಪೋಡಿಗೆ ಸಾಕು ಮೂರೇ ಮೂರು ದಾಖಲೆಗಳು- ತಹಶೀಲ್ದಾರ್‌ಗೆ ಪೋಡಿಯ ಸಂಪೂರ್ಣ ಅಧಿಕಾರ
ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣ: ಪೋಡಿಗೆ ಸಾಕು ಮೂರೇ ಮೂರು ದಾಖಲೆಗಳು- ತಹಶೀಲ್ದಾರ್‌ಗೆ ಪೋಡಿಯ ಸಂಪೂರ್ಣ ಅಧಿಕಾರ
ಎಲ್ಲ ಭೂ ದಾಖಲೆಗಳನ್ನು ಡಿಜಿಟಲ್ ವೇದಿಕೆಯಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯ ನಡೆಯುತ್ತಿದ್ದು, ಇನ್ನು ಮುಂದೆ ಜಮೀನಿನ ಪೋಡಿ ಪ್ರಕ್ರಿಯೆ ಸುಲಭವಾಗಿ ನಡೆಯಲಿದೆ. ಒಂದು ಹಂತದ ವರೆಗೆ ತಹಶೀಲ್ದಾರರಿಗೆ ಪೋಡಿಯ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಈ ಕುರಿತು ಕಂದಾಯ ಇಲಾಖೆ ನೂತನ ಆದೇಶ ಹೊರಡಿಸಿದೆ. ಇನ್ನು ಮುಂದೆ, ಕನಿಷ್ಟ ದಾಖಲೆಗಳ ಆಧಾರದಲ್ಲಿ ಆಯಾ ತಹಶೀಲ್ದಾರ್ ಅವರು ದಾಖಲೆಗಳ ನೈಜತೆಯನ್ನು ಪರಿಶೀಲಿಸಿ ಪೋಡಿ ಮಾಡಲು ಆದೇಶ ಹೊರಡಿಸಬಹುದು.
ಈ ಹಿನ್ನೆಲೆಯಲ್ಲಿ, ರೈತರ ಬಳಿಯಲ್ಲಿ ಕನಿಷ್ಟ ಮೂರು ದಾಖಲಾತಿಗಳು ಲಭ್ಯವಿದ್ದರೂ ರೈತರಿಗೆ ಮಂಜೂರಾಗಿರುವ ಜಮೀನುಗಳ ಪೋಡಿ ಕಾರ್ಯ ಪೂರ್ಣಗೊಳಿಸಬಹುದು.
ನಮೂನೆ 1ರಿಂದ 5ನ್ನು ತಹಶೀಲ್ದಾರರು ತಯಾರಿಸಿದ ನಂತರ ಉಪ ವಿಭಾಗಾಧಿಕಾರಿಗಳು ಮತ್ತು ಭೂದಾಖಲೆಗಳ ಉಪ ನಿರ್ದೇಶಕರು ಪರಿಶೀಲಿಸಿ ಅನುಮೋದನೆ ನೀಡುತ್ತಿದ್ದರು. ಈ ಹಂತವನ್ನು ಕೈಬಿಡಲಾಗಿದ್ದು, ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಮಂಜೂರಾತಿಯ ನೈಜತೆಯನ್ನು ಖಚಿತಪಡಿಸಿಕೊಂಡ ನಂತರ ನೇರವಾಗಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪೋಡಿ ಮಾಡಲು ಸೂಚಿಸಬಹುದು.
ಮೊದಲು ಯಾವುದೇ ಒಂದು ದಾಖಲೆಗಳು ಲಭ್ಯವಿಲ್ಲದಿದ್ದರೂ ಆ ಕಡತವನ್ನು "ಗೈರು ವಿಲೇ ಸಮಿತಿ" ಮುಂದೆ ಮಂಡಿಸಬೇಕಿತ್ತು. ಈ ಪ್ರಕ್ರಿಯೆಗೆ ಸುದೀರ್ಘ ಅವಧಿ ತಗಲುತ್ತಿತ್ತು. ಇದರಿಂದ ಜಮೀನಿನ ಪೋಡಿ ಕಾರ್ಯ ಬಹಳಷ್ಟು ವಿಳಂಬವಾಗುತ್ತಿದ್ದವು.
ಪೋಡಿ ದುರಸ್ತಿಗಾಗಿ ನಮೂನೆ 1ರಿಂದ 5 ಮತ್ತು 6ರಿಂದ 10ರ ವರೆಗಿನ ಭೂ ದಾಖಲೆಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿತ್ತು. ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದ್ದರೂ ಸಮರ್ಪಕ ದಾಖಲೆಗಳ ಕೊರತೆಯ ಕಾರಣ ಜಮೀನು ಪೋಡಿ ಆಗಿರಲಿಲ್ಲ. ಈ ಕಾರಣದಿಂದ ರೈತರು ಈಗಲೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಲೇ ಇದ್ದಾರೆ. ಒಂದು ಮೇಜಿನಿಂದ ಇನ್ನೊಂದು ಮೇಜಿಗೆ ಅಲೆಯುತ್ತಲೇ ಇದ್ದಾರೆ.
ಇದೀಗ ಪೋಡಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಒಂದು ಸರ್ವೇ ನಂಬರಿಗೆ ಎಲ್ಲ ಮಂಜೂರಾತಿಯ ನಮೂನೆ 1ರಿಂದ 5 ಮತ್ತು ಪೋಡಿ ಕೆಲಸವನ್ನು ಏಕಕಾಲಕ್ಕೆ ನಿರ್ವಹಿಸಲಾಗುತ್ತದೆ. ಎಲ್ಲ ದಾಖಲೆಗಳನ್ನೂ ಸ್ಕ್ಯಾನ್ ಮಾಡಿ ಅಳವಡಿಸಲಾಗುತ್ತಿದೆ. ಒಂದು ಸರ್ವೇ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಖಾಯಂ ಆಗಿ ಲಭ್ಯವಾಗುತ್ತದೆ.
ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರರು ನಮೂನೆ 1ರಿಂದ 5 ಮಾಹಿತಿಯನ್ನು ಭರ್ತಿ ಮಾಡಿ, ಡಿಜಿಟಲ್ ಸಹಿ ಮಾಡುವಂತಹ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿದೆ.
ದಾರಿಗೆ ಪ್ರತ್ಯೇಕ ಅಸ್ತಿತ್ವ
ಮಂಜೂರಾತಿ ನಕ್ಷೆಯಲ್ಲಿ ಗುರುತಿಸಿರುವ ಹೊಲದ ದಾರಿಯನ್ನು ದುರಸ್ತಿ ದಾಖಲೆಯಲ್ಲಿ ಪ್ರತ್ಯೇಕ ದಾರಿ ಎಂದೇ ಗುರುತಿಸಿ ಖಾಯಂಗೊಳಿಸಬೇಕು. ಈ ಜಾಗವನ್ನು ಯಾರ ವಿಸ್ತೀರ್ಣದಲ್ಲೂ ಸೇರಿಸಬಾರದು ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.