ಸಲಿಂಗಿಗಳ ಸಹಜೀವನ ಹಕ್ಕು ಎತ್ತಿ ಹಿಡಿದ ಹೈಕೋರ್ಟ್: ಪೊಲೀಸರ ಭದ್ರತೆಯಲ್ಲಿ ಗೆಳತಿ ಜೊತೆ ಸೇರಿದ ಯುವತಿ
ಸಲಿಂಗಿಗಳ ಸಹಜೀವನ ಹಕ್ಕು ಎತ್ತಿ ಹಿಡಿದ ಹೈಕೋರ್ಟ್: ಪೊಲೀಸರ ಭದ್ರತೆಯಲ್ಲಿ ಗೆಳತಿ ಜೊತೆ ಸೇರಿದ ಯುವತಿ
ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಆಂಧ್ರ ಪ್ರದೇಶ ಹೈಕೋರ್ಟ್ ಎತ್ತಿಹಿಡಿದಿದೆ. ಕುಟುಂಬ ಸದಸ್ಯರ ಹಸ್ತಕ್ಷೇಪ ಇಲ್ಲದೆ ಅವರು ಮತ್ತೆ ಒಂದಾಗುವಂತೆ ನೋಡಿಕೊಳ್ಳಬೇಕು ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ತನ್ನ ಸಂಗಾತಿಯನ್ನು ಆಕೆಯ ಕುಟುಂಬ ತನ್ನಿಂದ ಬಲವಂತವಾಗಿ ದೂರ ಇಟ್ಟಿದೆ ಎಂದು ಆರೋಪಿಸಿ 25 ವರ್ಷದ ಅರ್ಜಿದಾರೆ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ರಘುನಂದನ್ ರಾವ್ ಮತ್ತು ಮಹೇಶ್ವರ ರಾವ್ ಕುಂಚೇಮ್ ಅವರಿದ್ದ ನ್ಯಾಯಪೀಠ ಈ ನಿರ್ದೇಶ ನೀಡಿದೆ.
ಕುಟುಂಬದ ವಶದಲ್ಲಿರುವ ಯುವತಿ ಅರ್ಜಿದಾರರೊಂದಿಗೆ ತೆರಳುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಅರ್ಜಿದಾರರೊಂದಿಗೆ ತೆರಳಲು ಇಲ್ಲವೇ ಕುಟುಂಬದ ವಶದಲ್ಲಿ ಇರುವ ಯುವತಿ ತಾನು ಬಯಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಕುಟುಂಬದ ವಶದಲ್ಲಿ ಇರುವ ಯುವತಿ ಸುರಕ್ಷಿತವಾಗಿ ಅರ್ಜಿದಾರರ ಮನೆಗೆ ತೆರಳುವಂತೆ ಪೊಲೀಸರು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಆಕೆಯ ನಿರ್ಧಾರದಲ್ಲಿ ಆಕೆಯ ಕುಟುಂಬದವರು ಮಧ್ಯಪ್ರವೇಶಿಸುವಂತೆ ಇಲ್ಲ ಎಂಬುದನ್ನೂ ಆದೇಶದಲ್ಲಿ ತಿಳಿಸಲಾಗಿದೆ.
ಕುಟುಂಬದ ವಶದಲ್ಲಿ ಇರುವ ಯುವತಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಡಿಸೆಂಬರ್ 12ರಂದು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಡಿಸೆಂಬರ್ 17ರಂದು ಯುವತಿ ಹಾಜರಾದಾಗ ನ್ಯಾಯಾಲಯ ಗೌಪ್ಯವಾಗಿ ಆಕೆಯ ಜೊತೆಗೆ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಆಕೆ ಸ್ವ-ಇಚ್ಚೆಯಿಂದ ಅರ್ಜಿದಾರರ ಜೊತೆಗೆ ತೆರಳುವ ಬಯಕೆ ಹೊಂದಿರುವುದಾಗಿ ತಿಳಿಸಿದ್ದರು.
ಹೀಗಾಗಿ ಆಕೆಯ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಯುವತಿಯ ಕುಟುಂಬದವರಿಗೆ ನ್ಯಾಯಪೀಠ ಸೂಚನೆ ನೀಡಿದೆ.