ವಕೀಲರ ಸಂಘದಲ್ಲಿ ರಾಜಕೀಯ ನಾಯಕರ ಆಯ್ಕೆಗೆ ನಿರ್ಬಂಧ- ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ವಕೀಲರ ಸಂಘದಲ್ಲಿ ರಾಜಕೀಯ ನಾಯಕರ ಆಯ್ಕೆಗೆ ನಿರ್ಬಂಧ- ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ವಿವಿಧ ವಕೀಲರ ಸಂಘಗಳ ಪದಾಧಿಕಾರಿಗಳು ಮತ್ತು ಅಧ್ಯಕ್ಷರ ಹುದ್ದೆಗೆ ರಾಜಕೀಯ ನಾಯಕರು ಮತ್ತು ಸದಸ್ಯ ಆಯ್ಕೆಗೆ ನಿರ್ಬಂಧ ಹೇರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ರಾಜಕೀಯ ಪಕ್ಷಗಳ ಸದಸ್ಯರಾಗಿರುವ ವ್ಯಕ್ತಿಗಳು ಅಥವಾ ನಾಯಕರು ವಕೀಲರ ಸಂಘಗಳು ಮತ್ತು ಬಾರ್ ಕೌನ್ಸಿಲ್‌ಗಳ ಪದಾಧಿಕಾರಿಗಳಾಗಬಾರದು ಎಂದು ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ವಕೀಲರ ಸಂಘಗಳಲ್ಲಿ ಕಾರ್ಯಕಾರಿ ಸಮಿತಿ ಅಥವಾ ಪದಾಧಿಕಾರಿಗಳಾಗಲು ಯಾವುದೇ ನಿರ್ಬಂಧವಿಲ್ಲ. ಅವರು ಆ ಸ್ಥಾನಕ್ಕೆ ಆಯ್ಕೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
"ವಕೀಲರ ಸಂಘದ ಪದಾಧಿಕಾರಿಯೊಬ್ಬರು ರಾಜಕೀಯ ಸಿದ್ಧಾಂತವನ್ನು ಹೊಂದಿದ್ದರೆ, ಅದರಲ್ಲಿ ತಪ್ಪೇನಿದೆ? ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಅಧ್ಯಕ್ಷರಾಗಿ ಶ್ರೀ ಕಪಿಲ್ ಸಿಬಲ್ ಅವರನ್ನು ಪದಚ್ಯುತಗೊಳಿಸಲು ನೀವು ಬಯಸುತ್ತೀರಾ?. ಅದೇ ರೀತಿ, ನೀವು ಶ್ರೀ ಮನನ್ ಕುಮಾರ್ ಮಿಶ್ರಾ ಅವರನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಸ್ಥಾನದಿಂದ ಹೊರಹಾಕಲು ಬಯಸುತ್ತೀರಿ. ಎಂದು ಅರ್ಜಿದಾರರನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಪ್ರಶ್ನಿಸಿದರು.
ರಾಜಕೀಯ ಸಿದ್ಧಾಂತಗಳನ್ನು ಹೊಂದಿರುವ ವ್ಯಕ್ತಿಗಳು ಚುನಾಯಿತ ನಾಯಕರಾದರೆ ವಕೀಲರ ಸಂಘಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದ್ದರು.
ರಾಮ್ ಜೇಠ್ಮಲಾನಿ ಅವರು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗಲೂ ಸಹ ಸೇವೆ ಸಲ್ಲಿಸಿದ ಉದಾಹರಣೆಯನ್ನು ನ್ಯಾಯಮೂರ್ತಿ ಸೂರ್ಯ ಕಾಂತ್ ಉಲ್ಲೇಖಿಸಿದ್ದಾರೆ.