EPFO : ಪಿಎಫ್ ಕಚೇರಿಯಿಂದ ಕ್ಷಮಾದಾನ ಯೋಜನೆ: ಉದ್ಯೋಗದಾತರಿಗೆ ವರದಾನ
EPFO : ಪಿಎಫ್ ಕಚೇರಿಯಿಂದ ಕ್ಷಮಾದಾನ ಯೋಜನೆ: ಉದ್ಯೋಗದಾತರಿಗೆ ವರದಾನ
ಉದ್ಯೋಗಿಗಳ ಭವಿಷ್ಯ ನಿಧಿ ಪಾವತಿ ಮಾಡದಿರುವ ಉದ್ಯೋಗದಾತ ಸಂಸ್ಥೆಗಳಿಗೆ ದಂಡ ಪಾವತಿ ಇಲ್ಲದೆಯೇ ಬಾಕಿ ಮೊತ್ತ ಪಾವತಿಸಿ ಕ್ಷಮಾದಾನ ಪಡೆದುಕೊಳ್ಳುವ ಯೋಜನೆಯ ಅನುಷ್ಟಾನಕ್ಕೆ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಮುಂದಾಗಿದೆ.
ಕೇಂದ್ರ ಕಾರ್ಮಿಕ ಖಾತೆ ಸಚಿವ ಶ್ರೀ ಮನ್ಸೂಕ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ನಡೆದ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (CBT) ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.
ಇಪಿಎಫ್ ಕ್ಷಮಾದಾನ ಯೋಜನೆ 2024ಕ್ಕೆ ಕೇಂದ್ರೀಯ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶಿಫಾರಸ್ಸು ಮಾಡಲಾಗಿದೆ.
ಬಹಳಷ್ಟು ಕಂಪೆನಿಗಳ ಉದ್ಯೋಗಿಗಲ ಭವಿಷ್ಯ ನಿಧಿ ಮೊತ್ತವನ್ನು ಇಪಿಎಫ್‌ಒಗೆ ಪಾವತಿ ಮಾಡಲಾಗಿಲ್ಲ. ಇದರಿಂದ ಉದ್ಯೋಗಿಗಳಿಗೆ ತೊಂದರೆಯಾಗಿದೆ. ಅಂತಹ ಕಂಪೆನಿಗಳು ಅಥವಾ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಬಾಕಿ ಮೊತ್ತ ಪಾವತಿಸಲು ಅನುವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ಆನ್‌ಲೈನ್‌ನಲ್ಲಿ ಘೋಷಣೆ ಮಾಡಿಕೊಳ್ಳುವ ಮೂಲಕ ಕಂಪೆನಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ.
ಇದೇ ವೇಳೆ, ಇಪಿಎಫ್ ಯೋಜನೆ 1952ಕ್ಕೆ ತಿದ್ದುಪಡಿ ತರಲು ಮಂಡಳಿಯು ಅನುಮೋದನೆ ನೀಡಿದೆ. ಇದರಡಿ ಉದ್ಯೋಗಿಗೆ ನಿವೃತ್ತಿ ಇಡಗಂಟು ಪಾವತಿಯಾದ ದಿನದವರೆಗೂ ಬಡ್ಡಿ ಸೌಲಭ್ಯ ಸಿಗಲಿದೆ. ಇದರಿಂದ ಇಪಿಎಫ್‌ಒ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಪ್ರಯೋಜನ ದೊರೆಯಲಿದೆ.
ಇಡಿಎಲ್‌ಐ ವಿಸ್ತರಣೆ
ಇಪಿಎಫ್ ಖಾತೆದಾರರಿಗೆ ನೀಡುವ ಉದ್ಯೋಗಿಯ ಠೇವಣಿ ಆಧಾರಿತ ವಿಮಾ ಸೌಲಭ್ಯ ವಿಸ್ತರಣೆಗೆ ಮಂಡಳಿ ಅನುಮೋದನೆ ನೀಡಿದೆ.
ಪ್ರಸಕ್ತ ವರ್ಷದ ಎಪ್ರಿಲ್ 28ರಿಂದ ಪೂರ್ವಾನ್ವಯವಾಗುವಂತೆ ಈ ಯೋಜನೆಯಡಿ ಸೌಲಭ್ಯ ದೊರೆಯಲಿದೆ. ಯೋಜನೆಯ ಅಡಿಯಲ್ಲಿ ರೂ. 2.5 ಲಕ್ಷ ಹಾಗೂ ಗರಿಷ್ಠ 7 ಲಕ್ಷ ವಿಮಾ ಸೌಲಭ್ಯ ದೊರೆಯಲಿದೆ.