ಬಸ್ಸಿನಲ್ಲಿ ತಿಗಣೆ: ಚಿತ್ರನಟನ ಪತ್ನಿಗೆ ಲಕ್ಷ ರೂ. ಪರಿಹಾರ: ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು
ಬಸ್ಸಿನಲ್ಲಿ ತಿಗಣೆ: ಚಿತ್ರನಟನ ಪತ್ನಿಗೆ ಲಕ್ಷ ರೂ. ಪರಿಹಾರ: ಗ್ರಾಹಕ ನ್ಯಾಯಾಲಯದ ಮಹತ್ವದ ತೀರ್ಪು
ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತಿಗಣೆ ಆಟದಿಂದಾಗಿ ಅನಾರೋಗ್ಯಕೀಡಾದ ಚಿತ್ರನಟ ಹಾಗೂ ಕನ್ನಡ ಸೀರಿಯಲ್ ಕಲಾವಿದ ಶೋಭರಾಜ್ ಅವರ ಪತ್ನಿ ದೀಪಿಕ ಸುವರ್ಣ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ 1 ಲಕ್ಷ ಪರಿಹಾರ ನೀಡಲು ಖಾಸಗಿ ಕಂಪನಿಗೆ ಆದೇಶಿಸಿದೆ.
2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ದೀಪಿಕಾ ಸುವರ್ಣ 'ಸೀ ಬರ್ಡ್' ಕಂಪನಿಯ ಸ್ಲೀಪರ್ ಬಸ್ಸಿನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ರೆಡ್ ಬಸ್ ಆನ್ಲೈನ್ ಆಪ್ ನಲ್ಲಿ ಬಸ್ ಟಿಕೆಟ್ ಮಾಡಿದ್ದಾಗಲೇ ಬಸ್ ಸುವ್ಯವಸ್ಥಿತವಾಗಿ ಇದೆಯೇ ಎಂದು ವಿಚಾರಿಸಿ ಕೇಳಿ ತಿಳಿದುಕೊಂಡಿದ್ದರು. 'ಸೀ ಬರ್ಡ್' ಬಸ್ಸಿನಲ್ಲಿ ಉತ್ತಮ ಸೌಲಭ್ಯ ಇದೆ ಎಂದು ರೆಡ್ ಬಸ್ ಸಿಬ್ಬಂದಿ ತಿಳಿಸಿದರು.
ಆದರೆ, ಬಸ್‌ನಲ್ಲಿ ಪ್ರಯಾಣ ಆರಂಭಿಸಿದ ಕೆಲ ಹೊತ್ತಿನಲ್ಲೇ ತಿಗಣೆ ಕಾಟ ಶುರುವಾಗಿತ್ತು. ತಿಗಣೆ ಕಾಟ ತಾಳಲಾರದೆ ಬಸ್ ಸಿಬ್ಬಂದಿಗೂ ಮಾಹಿತಿ ನೀಡಿದ್ದರು. ಆದರೆ ಬಸ್ ಸಿಬ್ಬಂದಿ ದೀಪಿಕಾ ಅವರ ಮಾತಿಗೆ ಯಾವುದೇ ಬೆಲೆ ಕೊಟ್ಟಿರಲಿಲ್ಲ.
ಮರುದಿನ ಬೆಂಗಳೂರು ತಲುಪಿದಾಗ ದೀಪಿಕಾ ಅವರ ಕುತ್ತಿಗೆ, ಬೆನ್ನು ಸೇರಿದಂತೆ ದೇಹದ ಎಲ್ಲೆಡೆ ನೋವು ಕಾಣಿಸಿಕೊಂಡಿತ್ತು. ಅಸೌಖ್ಯದಿಂದಾಗಿ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ದೈಹಿಕ ನೋವಿನಿಂದಾಗಿ 15 ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು.
ಈ ಸಂದರ್ಭದಲ್ಲಿ ಶೋಭರಾಜ್ ಮತ್ತು ದೀಪಿಕ ಸುವರ್ಣ ಜೊತೆಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಜರಾಣಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದರು. ಮರುದಿನ ಶೂಟಿಂಗ್ ಇದ್ದುದರಿಂದ ತುರ್ತಾಗಿ ಮಂಗಳೂರಿನಿಂದ ದೀಪಿಕಾ ತೆರಳಿದ್ದರು.
ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಟಾರ್ ದಂಪತಿಗಳು ರಾಜ್ಯಾದ್ಯಂತ ಉತ್ತಮ ವೀಕ್ಷಕರನ್ನು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆದರೆ. ಬಸ್‌ನಲ್ಲಿ ಉಂಟಾದ ತಿಗಣೆ ಕಾಟದ ಪರಿಣಾಮ ಅಸೌಖ್ಯದಿಂದಾಗಿ ದೀಪಿಕ ಎರಡು ವಾರಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ದಂಪತಿಗೆ ಆರ್ಥಿಕ ನಷ್ಟವಾಗಿತ್ತು.
ರಿಯಾಲಿಟಿ ಶೋನಲ್ಲಿ ಭಾಗವಹಿಸದೆ ಇದ್ದ ಕಾರಣ ಶೋಭರಾಜ್ ಮತ್ತು ದೀಪಿಕಾ ಅವರ ತಂಡ ಇಡೀ ಕಾರ್ಯಕ್ರಮದಿಂದ ಎಲಿಮಿನೇಟ್ ಆಯಿತು. ಹೀಗಾಗಿ ಅವರಿಗೆ ಬರಬಹುದಾಗಿದ್ದ ಆದಾಯಕ್ಕೆ ಕತ್ತರಿ ಬಿತ್ತು. ಶೋಭರಾಜ್ ಮತ್ತು ದೀಪಿಕಾ ದಂಪತಿಗೆ ಒಂದು ಶೋ ಕಾರ್ಯಕ್ರಮಕ್ಕೆ ಕಲರ್ಸ್ ವಾಹಿನಿಯಿಂದ 40,000 ಸಂಭಾವನೆ ಸಿಗುತ್ತಿತ್ತು.
ತಿಗಣೆ ಕಾಟದ ಬಸ್ ಅವ್ಯವಸ್ಥೆಯಿಂದಾಗಿ ಬೇಸತ್ತ ದೀಪಿಕಾ ಸುವರ್ಣ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬಸ್ ಕಂಪನಿ ಮತ್ತು ಬಸ್ ಟಿಕೆಟ್ ಬುಕ್ ಮಾಡಿದ್ದ ರೆಡ್ ಬಸ್ ವಿರುದ್ಧ ಅವರು ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ತನಗಾದ ಆಸ್ಪತ್ರೆಯ ವೆಚ್ಚ 18,650ಗಳನ್ನು ವರ್ಷಕ್ಕೆ ಶೇಕಡ 15ರ ಬಡ್ಡಿ ಸಹಿತ ನೀಡಬೇಕು. ಅಲ್ಲದೆ ತನಗಾದ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ 25 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ವ್ಯಾಜ್ಯಗಳ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಹಂಡಿಗೋಲ್ ಮತ್ತು ಮಹಿಳಾ ಸದಸ್ಯ ಶಾರದಮ್ಮ ಎಚ್‌ಜಿ ಅವರು ಪ್ರಕರಣದಲ್ಲಿ ಅಂತಿಮ ಆದೇಶ ಮಾಡಿದರು.
ಆದೇಶದಲ್ಲಿ, ಆಸ್ಪತ್ರೆಗೆ ತಗುಲಿದ 18650/-ಗಳನ್ನು ಅರ್ಜಿ ದಾಖಲಿಸಿದ ಆರು ನಾಲ್ಕು 2023ರಿಂದ ಅನ್ವಯವಾಗುವಂತೆ ವರ್ಷಕ್ಕೆ ಆರು ಶೇಕಡ ಬಡ್ಡಿ ಸಹಿತ ಪಾವತಿ ಮಾಡಬೇಕು. ಅಲ್ಲದೆ ಬಸ್ ಟಿಕೆಟ್ ದುಡ್ಡು 840/-ಗಳನ್ನು ವಾರ್ಷಿಕ ಶೇಕಡ ಆರರ ಬಡ್ಡಿ ಸಹಿತ ಅರ್ಜಿದಾರರಿಗೆ ಪಾವತಿಸಬೇಕು.
ದೂರುದಾರಿಗೆ ಆಗಿರುವ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ವಾರ್ಷಿಕ ಶೇಕಡಾ 6ರ ಬಡ್ಡಿ ದರದೊಂದಿಗೆ ನೀಡಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ ಅರ್ಜಿದಾರರಿಗೆ ದಾವ ಖರ್ಚು ಆಗಿ ಹತ್ತು ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.