ಪೂಜಾ ಸ್ಥಳಗಳ ಕಾಯ್ದೆ: ಧಾರ್ಮಿಕ ಕಟ್ಟಡಗಳ ಸಮೀಕ್ಷೆ, ಹೊಸ ದಾವೆಗಳಿಗೆ ಬಿತ್ತು ಬ್ರೇಕ್! ಮಥುರಾ, ಜ್ಞಾನವ್ಯಾಪಿ, ವಾರಣಾಸಿ ಮಸೀದಿ ಪ್ರಕರಣಕ್ಕೂ ತಡೆ!
ಪೂಜಾ ಸ್ಥಳಗಳ ಕಾಯ್ದೆ: ಧಾರ್ಮಿಕ ಕಟ್ಟಡಗಳ ಸಮೀಕ್ಷೆ, ಹೊಸ ದಾವೆಗಳಿಗೆ ಬಿತ್ತು ಬ್ರೇಕ್! ಮಥುರಾ, ಜ್ಞಾನವ್ಯಾಪಿ, ವಾರಣಾಸಿ ಮಸೀದಿ ಪ್ರಕರಣಕ್ಕೂ ತಡೆ!
ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಮತ್ತು ಹೊಸ ದಾವೆಗಳಿಗೆ ಬ್ರೇಕ್ ಬಿದ್ದಿದೆ. ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವ ನಿರ್ಧಾರವಾಗುವ ತನಕ ಈ ನಿರ್ಬಂಧ ಮುಂದುವರಿಯಲಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಮಹತ್ವದ ನಿರ್ದೇಶನಾತ್ಮಕ ಆದೇಶವನ್ನು ಹೊರಡಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಪಿ.ವಿ. ಸಂಜಯ್ ಕುಮಾರ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನಾತ್ಮಕ ಆದೇಶ ನೀಡಿದೆ.
ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ದಾವೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿ ಇರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ ಇಲ್ಲವೇ ಸಮೀಕ್ಷೆ ನಡೆಸಲು ಅದೇಶಿಸದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಧಾರ್ಮಿಕ ಕಟ್ಟಡಗಳ ವಿರುದ್ಧ ದಾವೆ ಹೂಡುವುದನ್ನು 1991ರ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ)ಕಾಯ್ದೆ ನಿಷೇಧಿಸಲಿದೆ. ಈ ಕಾಯ್ದೆಯ ಸಿಂಧುತ್ವ ನಿರ್ಧಾರವಾಗುವವರೆಗೆ ಹೊಸ ದಾವೆಗಳನ್ನು ದಾಖಲಿಸುವುದು ಅಥವಾ ಧಾರ್ಮಿಕ ಕಟ್ಟಡಗಳ ಕುರಿತ ದಾವೆಗಳನ್ನು ಮುಂದುವರಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಇದನ್ನು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠವೂ ದೃಢಪಡಿಸಿದೆ. ಪ್ರಕರಣವು ನಮ್ಮ ನ್ಯಾಯಾಲಯದ ಮುಂದೆ ಇದೆ. ಅದರ ವಿಚಾರಣೆ ಬಾಕಿ ಇರುವುದರಿಂದ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ. ಇಲ್ಲವೇ ವಿಚಾರಣೆಗೆ ಆದೇಶ ಮಾಡುವಂತಿಲ್ಲ. ಈ ನಿರ್ದೇಶನ ಸೂಕ್ತವಾಗಿದೆ. ಬಾಕಿ ಉಳಿದಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಯಾವುದೇ ಆದೇಶ ಇಲ್ಲವೇ ಅಂತಿಮ ತೀರ್ಪನ್ನು ನೀಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟಿನಲ್ಲೇ ಪ್ರಕರಣ ಬಾಕಿ ಇರುವಾಗ ಯಾವುದೇ ನ್ಯಾಯಾಲಯ ಅದನ್ನು ಪರಿಶೀಲಿಸುವುದು ನ್ಯಾಯಿಕವಾಗಿ ಸೂಕ್ತವಾಗುತ್ತದೆಯೇ..? ಸುಪ್ರೀಂ ಕೋರ್ಟ್‌ನ ಈ ನ್ಯಾಯಪೀಠ ಕಾಯ್ದೆಯ ಅಧಿಕಾರ ಮತ್ತು ವ್ಯಾಪ್ತಿಯನ್ನು ಹೇಳುತ್ತಿದ್ದೇವೆ ಎಂದು ನ್ಯಾಯಪೀಠ ನಿರ್ದೇಶನದಲ್ಲಿ ಹೇಳಿದೆ.
ಇಂತಹ ವಿಚಾರಗಳಲ್ಲಿ ಹೊಸ ದಾವೆ ಹೂಡುವಂತಿಲ್ಲ ಎಂಬುದನ್ನೂ ಅದು ಸ್ಪಷ್ಟಪಡಿಸಿದೆ. ಈ ನಿರ್ದೇಶನವು ನಾಲ್ಕು ಧಾರ್ಮಿಕ ಕಟ್ಟಡಗಳಾದ ಸಂಭಾಲ್‌ನ ಶಾಹೀ ಜಾಮಾ ಮಸೀದಿ, ವಾರಣಾಸಿಯ ಜ್ಞಾನವಾಪಿ ಮಸೀದಿ, ಮಧುರಾದ ಶಾಹೀ ಈದ್ಗಾ ಮಸೀದಿ ಮತ್ತು ರಾಜಸ್ಥಾನದ ಆಜ್ಮೀರ್ ದರ್ಗಾ ಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ 18 ಮೊಕದ್ದಮೆಗಳ ಮೇಲೆ ಪರಿಣಾಮ ಬೀಳಲಿದೆ.