ಅಕ್ರಮ ಆಸ್ತಿ ನೋಂದಣಿಗೆ ಸಹಕಾರ: ಇಬ್ಬರು ಉಪ ನೊಂದಣಾಧಿಕಾರಿಗಳ ಅಮಾನತು
ಅಕ್ರಮ ಆಸ್ತಿ ನೋಂದಣಿಗೆ ಸಹಕಾರ: ಇಬ್ಬರು ಉಪ ನೊಂದಣಾಧಿಕಾರಿಗಳ ಅಮಾನತು
ಕಳೆದ ಸುಮಾರು ಎರಡು ತಿಂಗಳಿನಿಂದ ಅಕ್ರಮ ಆಸ್ತಿ ನೋಂದಣಿಗೆ ಸಹಕಾರ ನೀಡಿದ್ದ ಇಬ್ಬರು ಉಪ ನೊಂದಣಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ರಾಜ್ಯ ಸರಕಾರ ರೂಪಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದೆ ಆಸ್ತಿ ನೋಂದಣಿ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಉಪ ನೊಂದಣಾಧಿಕಾರಿಗಳ ಅಮಾನತು ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ.
ಉತ್ತರ ಬೆಂಗಳೂರಿನ ಹೇಸರಘಟ್ಟದ ಹಿರಿಯ ಉಪನೋಂದಣಾಧಿಕಾರಿ ಎನ್. ಮಂಜುನಾಥ್ ಮತ್ತು ಕಾಚರಕನಹಳ್ಳಿ ನಾಗವಾರ ಇಲ್ಲಿ ಉಪ ನೊಂದಣಾಧಿಕಾರಿಯಾಗಿದ್ದ ಕುಮಾರಿ ರೂಪ ಅವರು ಅಮಾನತುಗೊಂಡ ಅಧಿಕಾರಿಗಳು.
ಡಿಸೆಂಬರ್ 24ರಂದು ಈ ಅಮಾನತು ಆದೇಶ ಹೊರಡಿಸಲಾಗಿದ್ದು ಅಕ್ರಮ ಆಸ್ತಿ ನೋಂದಣಿಯಲ್ಲಿ ಇವರು ಸಹಕಾರ ನೀಡಿದ್ದರು ಎಂಬ ಆರೋಪ ಇವರ ಮೇಲಿದೆ.
ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಅವರು ಅಕ್ಟೋಬರ್ 7, 2024ರಂದು ಆದೇಶ ಹೊರಡಿಸಿದ್ದು ಇದರ ಪ್ರಕಾರ ಇ-ಖಾತ ಸರ್ಟಿಫಿಕೇಟ್ ಹೊಂದಿದ್ದರೆ ಮಾತ್ರ ನೋಂದಣಿಗೆ ಅವಕಾಶ ಇದೆ ಎಂದು ಆದೇಶದಲ್ಲಿ ಹೇಳಲಾಗಿತ್ತು. ಆಸ್ತಿ ನೋಂದಣಿಯಲ್ಲಿ ಅಕ್ರಮಗಳನ್ನು ತಡೆಗಟ್ಟುವುದು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಈ ಆದೇಶ ಅಕ್ಟೋಬರ್ 28 2024 ರಂದು ಜಾರಿಗೆ ಬಂದಿತ್ತು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯದರ್ಶಿ ಶ್ರೀ ಕೆ ದಯಾನಂದ ಅವರು ಕಂದಾಯ ಇಲಾಖೆ ಮತ್ತು ಎಲ್ಲಾ ಜಿಲ್ಲಾ ರಿಜಿಸ್ಟರ್ ಗಳಿಗೆ ಈ ಬಗ್ಗೆ ಸುತ್ತೋಲೆಯನ್ನು ನೀಡಿದ್ದು ಇದರಲ್ಲಿ ಕುಮಾರಿ ರೂಪ ಮತ್ತು ಮಂಜುನಾಥ್ ಅವರ ಅಮಾನತು ಕುರಿತ ವಿವರಣೆಯನ್ನು ನೀಡಲಾಗಿದೆ ಎನ್ನಲಾಗಿದೆ.
ಕುಮಾರ ರೂಪ ಅವರು ಅಕ್ಟೋಬರ್ ಏಳರಿಂದ ನವಂಬರ್ 26 2024ರ ಅವಧಿಯಲ್ಲಿ ಸುಮಾರು 157 ಅಕ್ರಮ ನೋಂದಣಿಗಳನ್ನು ಸ್ವೀಕರಿಸಿದ್ದರು. ಮ್ಯಾನುವಲ್ ಖಾತಾ ಸರ್ಟಿಫಿಕೇಟ್ ಸ್ವೀಕಾರ ದ ಮೂಲಕ ಈ ಅಕ್ರಮ ನೋಂದಣಿಯನ್ನು ಮಾಡಲಾಗಿತ್ತು.
ಈ ನೋಂದಣಿಗಳನ್ನು ಹೇಗೆ ಮಾಡಲಾಗಿದೆ ಮತ್ತು ಯಾರೆಲ್ಲಾ ಈ ಕರ್ಚದ ಹಿಂದೆ ಇದ್ದಾರೆ ಎಂಬ ಬಗ್ಗೆ ಆಳವಾದ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ದಯಾನಂದ ಅವರು ಮಾಹಿತಿ ನೀಡಿದ್ದಾರೆ. ಕಾವೇರಿ ತಂತ್ರಾಂಶದಲ್ಲಿ ಇರುವ ನ್ಯೂನ್ಯತೆಗಳು ಮತ್ತು ಇಂತಹ ಅಕ್ರಮ ಆಸ್ತಿ ನೋಂದಣಿಯನ್ನು ತಡೆಗಟ್ಟಲು ಇಲಾಖೆ ಗಂಭೀರ ಚಿಂತನೆಯನ್ನು ಮಾಡಲಾಗಿದೆ.
ಹಿರಿಯ ಉಪ ನೋಂದಣಾಧಿಕಾರಿ ಮಂಜುನಾಥ್ ಅವರನ್ನು ಇಂಥದ್ದೇ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಅವರೂ ಭೌತಿಕ ಖಾತಾ (ಫಿಸಿಕಲ್ ಖಾತಾ) ಬಳಸಿ ಇವರು ಆಸ್ತಿ ನೋಂದಣಿಗೆ ಸಹಕಾರ ನೀಡಿದ್ದರು. ಆದರೆ ಅವರು ಎಷ್ಟು ಅಕ್ರಮ ನೋಂದಣಿಯಲ್ಲಿ ಸಹಕಾರ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿಲ್ಲ