
ಬೆಂಗಳೂರು ವಕೀಲರ ಸಂಘದ ಚುನಾವಣೆ ರದ್ದು: ವೇಳಾಪಟ್ಟಿ ಅಮಾನತು ಮಾಡಿ ಚುನಾವಣಾಧಿಕಾರಿ ಪ್ರಕಟಣೆ
ಬೆಂಗಳೂರು ವಕೀಲರ ಸಂಘದ ಚುನಾವಣೆ ರದ್ದು: ವೇಳಾಪಟ್ಟಿ ಅಮಾನತು ಮಾಡಿ ಚುನಾವಣಾಧಿಕಾರಿ ಪ್ರಕಟಣೆ
ದೇಶದ ಅತಿ ದೊಡ್ಡ ವಕೀಲರ ಸಂಘ ಎಂದು ಪ್ರಖ್ಯಾತಿ ಪಡೆದ ಬೆಂಗಳೂರು ವಕೀಲರ ಸಂಘ(ಎಎಬಿ)ದ ಚುನಾವಣೆ ರದ್ದುಗೊಳಿಸಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ. 2025ರ ಫೆಬ್ರವರಿ ಎರಡರಂದು ಬೆಂಗಳೂರು ವಕೀಲರ ಸಂಘಕ್ಕೆ ಚುನಾವಣೆ ನಡೆಯಬೇಕಿತ್ತು.
ಮಹಿಳಾ ವಕೀಲ ಅಭ್ಯರ್ಥಿಗಳಿಗೆ ಕನಿಷ್ಠ 30ರಷ್ಟು ಮೀಸಲಾತಿ ಕಲ್ಪಿಸುವ ಬಗ್ಗೆ ಪರಿಶೀಲಿಸಿ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದ ಬೆನ್ನಲ್ಲಿ ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ.
ಚುನಾವಣೆಯ ಉಸ್ತುವಾರಿ ಹೊತ್ತ ಉನ್ನತಾಧಿಕಾರಿ ಸಮಿತಿ ಅಧ್ಯಕ್ಷ ಹಾಗೂ ಪದಾಂಕಿತ ಹಿರಿಯ ವಕೀಲ ಕೆಎನ್ ಫಣೀಂದ್ರ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2025ರ ಜನವರಿ 8ರಂದು ಪ್ರಕಟಿಸಿರುವ ವೇಳಾಪಟ್ಟಿಯನ್ನು ಅಮಾನತು ಮಾಡಲಾಗಿದೆ. ಫೆಬ್ರವರಿ ಎರಡಕ್ಕೆ ನಿಗದಿಯಾಗಿದ್ದ ಸಂಘದ ಚುನಾವಣೆಯನ್ನು ರದ್ದುಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು ವಕೀಲರ ಸಂಘದ ಚುನಾಯಿತ ಆಡಳಿತ ಮಂಡಳಿ ಸದಸ್ಯತ್ವದಲ್ಲಿ ಮಹಿಳೆಯರಿಗೆ ಶೇಕಡ 30ರಷ್ಟು ಪ್ರಾತಿನಿಧ್ಯ ನೀಡಬೇಕು, ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು.
ಅಗತ್ಯ ಬಿದ್ದರೆ ಉನ್ನತ ಅಧಿಕಾರಿ ಸಮಿತಿ ಮತ್ತು ಚುನಾವಣಾ ಅಧಿಕಾರಿ ನಾಮಪತ್ರ ಸ್ವೀಕಾರ ದಿನಾಂಕ ಮತ್ತು ಚುನಾವಣೆಯನ್ನು ಮುಂದೂಡಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಚುನಾವಣಾಧಿಕಾರಿ ಈ ಪ್ರಕಟಣೆ ಹೊರಡಿಸಿ ಚುನಾವಣೆಯನ್ನು ರದ್ದು ಮಾಡಿದ್ದಾರೆ.
ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಜನವರಿಯ 20ರಂದು ಮುಗಿದಿತ್ತು. ಈ ಚುನಾವಣೆಯಲ್ಲಿ 140 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ವಕೀಲರ ಸಂಘದ ಚುನಾಯಿತ ಆಡಳಿತ ಮಂಡಳಿಗೆ ಆಯ್ಕೆ ಬಯಸಿ ಚುನಾವಣಾ ಕಣದಲ್ಲಿ ಇದ್ದರು.