ಪತಿ ಜೊತೆ ಬಾಳಬೇಕು ಎಂಬ ಆದೇಶ ಧಿಕ್ಕರಿಸಿದರೂ ಪತ್ನಿಗೆ ಜೀವನಾಂಶ ನೀಡಬೇಕೇ? - ಗೊಂದಲ ನಿವಾರಿಸಿದ ಸುಪ್ರೀಂ ಕೋರ್ಟ್
ಪತಿ ಜೊತೆ ಬಾಳಬೇಕು ಎಂಬ ಆದೇಶ ಧಿಕ್ಕರಿಸಿದರೂ ಪತ್ನಿಗೆ ಜೀವನಾಂಶ ನೀಡಬೇಕೇ? - ಗೊಂದಲ ನಿವಾರಿಸಿದ ಸುಪ್ರೀಂ ಕೋರ್ಟ್
ಪತ್ನಿಗೆ ಜೀವನಾಂಶ ಕಾನೂನಿನ ಪ್ರಶ್ನೆಯನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಜೀವನಾಂಶ ಕುರಿತ ಮಹತ್ವದ ತೀರ್ಪು ನೀಡಿದ ಅಪೇಕ್ಸ್ ಕೋರ್ಟ್
ಪತಿಯ ಜೊತೆಗೆ ಬಾಳಬೇಕು ಎಂದು ಪತ್ನಿಗೆ ಕೌಟುಂಬಿಕ ಕೋರ್ಟು ನೀಡಿದ ಆದೇಶವನ್ನು ಪಾಲಿಸದೆ ಇದ್ದಾಗ, ಆತನ ಜೊತೆ ಬಾಳ್ವೆ ನಡೆಸುವುದಕ್ಕೆ ಆಕೆಗೆ ಸಾಧ್ಯವಿಲ್ಲ ಎಂದು ಹೇಳಲು ಪತ್ನಿಗೆ ಸಕಾರಣಗಳು ಇದ್ದರೆ ಮಾತ್ರ ಆಕೆಗೆ ಪತಿಯಿಂದ ಜೀವನ ಅಂಶ ಪಡೆಯುವ ಹಕ್ಕನ್ನು ನೀಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯ ಪೀಠ ಈ ತೀರ್ಪು ನೀಡಿದೆ.
ಮದುವೆಯ ಸಂಬಂಧವನ್ನು ಪುನರ್ ಸ್ಥಾಪಿಸುವ ಆದೇಶವನ್ನು ಪತಿಯು ಕೋರ್ಟಿನಿಂದ ಪಡೆದುಕೊಂಡಿದ್ದು, ಆ ನಂತರದಲ್ಲಿ ಕೋರ್ಟಿನ ಆದೇಶ ಹೊರತಾಗಿಯೂ ಪತಿಯ ಜೊತೆಗೆ ವಾಸ ಮಾಡಲು ಪತ್ನಿ ನಿರಾಕರಿಸಿದರೆ, ಅಂತಹ ಸಂದರ್ಭದಲ್ಲಿ ಆಕೆಗೆ ಜೀವನಾಂಶ ಕೊಡಬೇಕಾಗುತ್ತದೆಯೇ ಎಂಬ ಕಾನೂನಿನ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಪೀಠ ಈ ತೀರ್ಪು ನೀಡಿದೆ.
ಮದುವೆಯ ಸಂಬಂಧವನ್ನು ಪುನರ್ ಸ್ಥಾಪಿಸುವ ಕೋರ್ಟ್ ಆದೇಶವನ್ನು ಪತ್ನಿಯು ಪಾಲಿಸದೇ ಇದ್ದಾಗ ಅದೊಂದೇ ಕಾರಣಕ್ಕೆ ಆಕೆಗೆ ಜೀವನ ಅಂಶ ನಿರಾಕರಿಸಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಹಲವು ಹೈಕೋರ್ಟ್ ಗಳು ಈಗಾಗಲೇ ಉತ್ತರ ಒದಗಿಸಿವೆ. ಆದರೆ, ಇಂತಹ ವಿಚಾರದಲ್ಲಿ ನಿರ್ದಿಷ್ಟವಾದ ಅಭಿಪ್ರಾಯ ಇಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ಪ್ರತಿಯಂದು ಪ್ರಕರಣವು ಆ ಕೇಸಿನ ಸತ್ಯಾಸತ್ಯತೆಯನ್ನು ಆಧರಿಸುತ್ತದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಪತಿಯ ಜೊತೆಗೆ ಬಾಳ್ವೆ ನಡೆಸುವುದನ್ನು ನಿರಾಕರಿಸುವುದಕ್ಕೆ ಅಕೆಗೆ ಸಾಕಷ್ಟು ಕಾರಣಗಳು ಇವೆಯೇ ಎಂಬುದನ್ನು ಸಂಬಂಧಪಟ್ಟ ನ್ಯಾಯಾಲಯಗಳು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಪ್ರಕರಣದ ವಿವರ:
ಪರಸ್ಪರ ಬೇರೆಯಾಗಿರುವ ಜಾರ್ಖಂಡ್ ನ ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಮಾನ ನೀಡಿದೆ. ಈ ದಂಪತಿ 2014ರ ಮೇ ಒಂದರಂದು ಮದುವೆ ಆಗಿದ್ದರು. ಆದರೆ, 2015ರ ಆಗಸ್ಟ್ ನಲ್ಲಿ ಪ್ರತ್ಯೇಕವಾದರು. ಆಗ ಪತಿಯು "ದಂಪತಿ ಒಟ್ಟಾಗಿ ಬಾಳಬೇಕು" ಎಂದು ಆದೇಶ ನೀಡಬೇಕು ಎಂಬ ಕೋರಿಕೆಯೊಂದಿಗೆ ರಾಂಚಿಯ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು.
ಇದೇ ವೇಳೆ, "ಪತಿ ತನಗೆ ಕಿರುಕುಳ ನೀಡುತ್ತಿದ್ದಾನೆ. 5 ಲಕ್ಷ ರೂಪಾಯಿ ವರದಕ್ಷಿಣೆ ನೀಡಬೇಕು ಎಂದು ಪೀಡಿಸುತ್ತಿದ್ದಾನೆ" ಎಂದು ಪತ್ನಿಯು ನ್ಯಾಯಾಲಯಕ್ಕೆ ತಿಳಿಸಿದ್ದರು. ಪತಿಯು ಪತ್ನಿಯ ಜೊತೆ ವಾಸಿಸಲು ಬಯಸುತ್ತಿದ್ದಾನೆ ಎಂದು ಹೇಳಿದ್ದ ಕೌಟುಂಬಿಕ ನ್ಯಾಯಾಲಯ, ಅಂತಿಮವಾಗಿ, ದಂಪತಿ ಒಟ್ಟಿಗೆ ಬದುಕು ನಡೆಸಬೇಕು ಎಂದು 2022ರಲ್ಲಿ ಆದೇಶ ನೀಡಿತ್ತು.
ಆದರೆ, ಈ ಆದೇಶವನ್ನು ಪತ್ನಿಯು ಪಾಲಿಸಲಿಲ್ಲ. ಬದಲಿಗೆ ಆಕೆಯು ತನಗೆ ಜೀವನ ಅಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಪತ್ನಿಗೆ ತಿಂಗಳಿಗೆ 10,000 ಜೀವನ ಅಂಶ ನೀಡಬೇಕು ಎಂದು ನ್ಯಾಯಾಲಯ ಪತಿಗೆ ಆದೇಶ ನೀಡಿತ್ತು.
ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಪತಿ ಜಾರ್ಖಂಡ್ ಹೈಕೋರ್ಟ್ ಮೊರೆ ಹೋದರು. ಕೌಟುಂಬಿಕ ನ್ಯಾಯಾಲಯದ ಆದೇಶವಿದ್ದರೂ ಪತಿಯು ತನ್ನ ಗಂಡನ ಮನೆಗೆ ಹೋಗಿಲ್ಲ ಎಂದು ಹೈಕೋರ್ಟ್ ಹೇಳಿತು. ಇಂತಹ ಪ್ರಕರಣದಲ್ಲಿ ಪತ್ನಿಯು ಜೀವನ ಅಂಶಕ್ಕೆ ಅರ್ಹರಲ್ಲ ಹಾಗೂ ಪತ್ನಿಗೆ ಜೀವನಾಂಶ ಕೊಡಬೇಕಾಗಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿತು.
ಈ ಆದೇಶದಿಂದ ಬಾಧಿತರಾದ ಪತ್ನಿಯು ಸುಪ್ರೀಂ ಕೋರ್ಟ್ ನ ಮೆಟ್ಟಿಲೇರಿದ್ದರು