
ಅನುಕಂಪದ ನೌಕರಿ ಅರ್ಜಿ 3 ತಿಂಗಳಲ್ಲಿ ವಿಲೇ ಮಾಡದಿದ್ದರೆ ಸಕ್ಷಮ ಪ್ರಾಧಿಕಾರದಿಂದಲೇ ಬಾಧಿತರಿಗೆ ಪರಿಹಾರ: ಕರ್ನಾಟಕ ಹೈಕೋರ್ಟ್
ಅನುಕಂಪದ ನೌಕರಿ ಅರ್ಜಿ 3 ತಿಂಗಳಲ್ಲಿ ವಿಲೇ ಮಾಡದಿದ್ದರೆ ಸಕ್ಷಮ ಪ್ರಾಧಿಕಾರದಿಂದಲೇ ಬಾಧಿತರಿಗೆ ಪರಿಹಾರ: ಕರ್ನಾಟಕ ಹೈಕೋರ್ಟ್
ಅನುಕಂಪದ ಆಧಾರದಲ್ಲಿ ನೌಕರಿಯನ್ನು ಕೋರಿ ಸಲ್ಲಿಸುವ ಅರ್ಜಿಯನ್ನು ನಿಯಮ ಪ್ರಕಾರ ಮೂರು ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಈ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ವಿಲೇವಾರಿ ಮಾಡದಿದ್ದರೆ ಆಗ ಆ ಸಕ್ಷಮ ಪ್ರಾಧಿಕಾರವೇ ಬಾಧಿತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಮೂರು ತಿಂಗಳಲ್ಲಿ ಪರಿಗಣಿಸದೆ ಹೋದರೆ ಸಕ್ಸಮ ಪ್ರಾಧಿಕಾರವು ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ವೇತನ ಪಾವತಿಸುವ ಹೊಣೆ ಬರಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ
"ಹೃತಿಕ್ ಎಂ Vs ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಈ ತೀರ್ಪಿನ ಮೂಲಕ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲು ಸರಕಾರದ ಪ್ರಾಧಿಕಾರಗಳು ಅನಗತ್ಯ ವಿಳಂಬ ಮಾಡುವ ಧೋರಣೆಗೆ ನ್ಯಾಯಪೀಠ ಕಡಿವಾಣ ಹಾಕಿದೆ.
ಅನುಕಂಪದ ಉದ್ಯೋಗಕ್ಕೆ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವಲ್ಲಿ ಸರಕಾರದ ಪ್ರಾಧಿಕಾರಗಳು ಅನಗತ್ಯ ವಿಳಂಬ ಮಾಡುತ್ತಿದೆ. ಈ ವಿಳಂಬವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಪ್ರಕರಣಗಳು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಈ ರೀತಿ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಅರ್ಜಿಗಳನ್ನು ಪರಿಗಣಿಸದೆ ಬಾಕಿ ಉಳಿಸಿಕೊಂಡರೆ ಅನುಕಂಪ ಉದ್ಯೋಗ ಒದಗಿಸಲು ರಾಜ್ಯ ಸರಕಾರ ರೂಪಿಸಿರುವ ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ಆಧರಿತ ಉದ್ಯೋಗ) ನಿಯಮಗಳು 1996 ಇದರ ಮೂಲ ಉದ್ದೇಶವೇ ನಾಶವಾದಂತಾಗುತ್ತದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಕುಟುಂಬದ ಏಕೈಕ ಆಸರೆಯಾಗಿರುವ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಾಗ ಆ ಕುಟುಂಬ ಆಘಾತದ ಜೊತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಆಗ ಕುಟುಂಬ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ನಿಯಮಾನುಸಾರವಾಗಿ, ಅನುಕಂಪದ ಆಧಾರಿತ ಉದ್ಯೋಗಕ್ಕಾಗಿ ಅರ್ಜಿದಾರರು ಸಲ್ಲಿಸಿದ ಅರ್ಜಿಗಳನ್ನು ಮೂರು ತಿಂಗಳಲ್ಲಿ ಪರಿಗಣಿಸಿ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅರ್ಜಿದಾರ ಅನುಕಂಪದ ಉದ್ಯೋಗ ಪಡೆದಾಗ ಆತನ ಅರ್ಜಿ ಪರಿಗಣಿಸಲು ಮಾಡಿದ ಅನಗತ್ಯ ವಿಳಂಬಕ್ಕೆ ವೇತನ ಪಾವತಿಸಲು ಪ್ರಾಧಿಕಾರ ಹೊಣೆಯಾಗಿರುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ವಿವರ
ಮೈಸೂರಿನ ಕುವೆಂಪು ನಗರದಲ್ಲಿ ಹೈಸ್ಕೂಲ್ ಒಂದರಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ ನಿಂಗರಾಜು ಅವರು ಸೆಪ್ಟೆಂಬರ್ 11 2018ರಲ್ಲಿ ನಿಧನ ಹೊಂದಿದರು. ಅವರ ನಿಧನದ ಹಿನ್ನೆಲೆಯಲ್ಲಿ ಮೊದಲನೇ ಅರ್ಜಿದಾರರು ಅನುಕಂಪದ ಆಧಾರದ ನೌಕರಿಗೆ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು, ಶಿಕ್ಷಣ ಇಲಾಖೆಯ ಹಿಂಬರವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ನ್ಯಾಯಪೀಠವು ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿತು ಹಾಗೂ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಎಂಟು ವಾರಗಳಲ್ಲಿ ಕಾನೂನು ರೀತ್ಯಾ ಬಗೆಹರಿಸುವಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತು.
ಆದರೆ, ಸಕ್ಷಮ ಪ್ರಾಧಿಕಾರವು ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ನಿಯಮ 2017 ರ ಪ್ರಕಾರ ಉದ್ಯೋಗ ನೀಡಲು ಅಸಾಧ್ಯ ಎಂಬುದಾಗಿ ಹಿಂಬರಹ ನೀಡಿತ್ತು.
ಈ ಹಿಂಬರಹದಿಂದ ಬಾಧಿತರಾದ ಅರ್ಜಿದಾರರು ಮತ್ತೆ ಹೈಕೋರ್ಟ್ ನ್ಯಾಯ ಪೀಠದ ಮೆಟ್ಟಿಲೇರಿದ್ದರು. ಅರ್ಜಿದಾರರ ತಂದೆ ಮೃತಪಟ್ಟ ಹಲವು ವರ್ಷಗಳ ಬಳಿಕ ಜಾರಿಗೆ ಬಂದ ನಿಯಮಗಳ ಆಧಾರದಲ್ಲಿ ತಮ್ಮ ಅನುಕಂಪ ಆಧಾರಿತ ನಿಯುಕ್ತಿಯನ್ನು ನಿರಾಕರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದರು.
ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಅನುಕಂಪ ಆಧಾರಿತ ಉದ್ಯೋಗಕ್ಕಾಗಿ ಮೃತಪಟ್ಟ ಒಂದು ವರ್ಷದ ಒಳಗೆ ಅರ್ಜಿದಾರರು ಅರ್ಜಿ ಸಲ್ಲಿಸಿರಬೇಕು ಮತ್ತು ಈ ಅರ್ಜಿ ಸ್ವೀಕರಿಸಿದ ಮೂರು ತಿಂಗಳಲ್ಲಿ ಅದನ್ನು ವಿಲೇವಾರಿ ಮಾಡಬೇಕು ಎಂಬುದಾಗಿ ತಿಳಿಸಿತು.
ಒಂದು ವೇಳೆ ಅರ್ಜಿಯನ್ನು ಇತ್ಯರ್ಥಗೊಳಿಸಲು ಸಾಧ್ಯವಾಗದಿದ್ದರೆ ಸಕ್ಷಮ ಪ್ರಾಧಿಕಾರವು ಅದಕ್ಕೆ ಸಂಬಂಧಪಟ್ಟ ನಷ್ಟವನ್ನು ಬರಿಸಲು ಸಿದ್ದರಿರಬೇಕು. ಅರ್ಜಿದಾರರಿಗೆ ಕಾನೂನು ರೀತಿಯ ಸಿಗಬೇಕಾದ ವೇತನವನ್ನು ಪರಿಹಾರವಾಗಿ ಕೊಡಬೇಕು ಎಂದು ಹೇಳಿತು.
ಪ್ರಕರಣ: ಹೃತಿಕ್ ಎನ್. Vs ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಮತ್ತಿತರರು
ಕರ್ನಾಟಕ ಹೈಕೋರ್ಟ್, W.P. 9564/2021 Dated 12-07-2021