ದೇಶದ ಅತಿ ದೊಡ್ಡ ವಕೀಲರ ಸಂಘಕ್ಕೆ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಸ್ಪರ್ಧೆ- ಗೆಲ್ಲೋದು ಯಾರು..?
ದೇಶದ ಅತಿ ದೊಡ್ಡ ವಕೀಲರ ಸಂಘಕ್ಕೆ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಸ್ಪರ್ಧೆ- ಗೆಲ್ಲೋದು ಯಾರು..?
ದೇಶದ ಅತಿ ದೊಡ್ಡ ವಕೀಲರ ಸಂಘ ಆಗಿರುವ ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘ (ಎಎಬಿ) ಇದಕ್ಕೆ ಫೆಬ್ರವರಿ ಎರಡರಂದು ಚುನಾವಣೆ ನಡೆಯಲಿದೆ.
ಸುಮಾರು 21,000 ವಕೀಲರು ಈ ಚುನಾವಣೆಯಲ್ಲಿ ಮತದಾನ ನಡೆಸಲಿದ್ದಾರೆ. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಮತ್ತು ನಾಲ್ಕು ವಿಭಾಗಗಳ ಪ್ರತಿನಿಧಿ ಸದಸ್ಯರ ಸ್ಥಾನಗಳು ಸೇರಿದಂತೆ ಒಟ್ಟು 32 ಸ್ಥಾನಗಳಿಗೆ 140 ಮಂದಿ ಸ್ಪರ್ಧೆ ನಡೆಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಇದೇ ಮೊದಲ ಬಾರಿ ಆರು ಮಂದಿ ಸ್ಪರ್ಧೆ ನಡೆಸಿದ್ದಾರೆ. ಎಎಬಿ ನಿಕಟಪೂರ್ವ ಅಧ್ಯಕ್ಷ ಮತ್ತು ಹಿರಿಯ ವಕೀಲರಾದ ವಿವೇಕ್ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎಪಿ ರಂಗನಾಥ್, ಎಎಬಿ ಯ ಮಾಜಿ ಪ್ರಧಾನ ಕಾರ್ಯದರ್ಶಿ ಟಿಜಿ ರವಿ, ವಕೀಲರಾದ ಆರ್ ರಾಜಣ್ಣ, ನಂಜಪ್ಪ ಕಾಳೇಗೌಡ ಮತ್ತು ಟಿ ಎ ರಾಜಶೇಖರ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಐದು ಮಂದಿ ಸ್ಪರ್ಧೆ ನಡೆಸಿದ್ದು ಮಾಜಿ ಖಜಾಂಚಿ ಶಿವಮೂರ್ತಿ, ಎಂ ಟಿ ಹರೀಶ್, ಹೆಚ್.ವಿ. ಪ್ರವೀಣ ಗೌಡ, ಕೆ ಅಕ್ಕಿ ಮಂಜುನಾಥಗೌಡ ಮತ್ತು ಎಂ ಎಚ್ ಚಂದ್ರಶೇಖರ್ ಸ್ಪರ್ಧೆ ನಡೆಸಿದ್ದಾರೆ.
ಇನ್ನು ಖಜಾಂಚಿ ಸ್ಥಾನಕ್ಕೆ ನಾಲ್ಕು ಮಂದಿ ಕಣ್ಣಿಟ್ಟಿದ್ದಾರೆ. ಮುನಿಯಪ್ಪ ಸಿಆರ್ ಗೌಡ, ಸಿಎಸ್ ಗಿರೀಶ್ ಕುಮಾರ್, ಟಿಸಿ ಸಂತೋಷ್ ಹಾಗೂ ಎ ವೇದಮೂರ್ತಿ ಸ್ಪರ್ಧೆ ಮಾಡುತ್ತಿದ್ದಾರೆ.
ಹೈಕೋರ್ಟ್ ಘಟಕದಿಂದ 7 ಮಂದಿ ಸದಸ್ಯರು, ಸಿಟಿ ಸಿವಿಲ್ ಕೋರ್ಟ್ ಘಟಕದಿಂದ 12 ಮಂದಿ ಸದಸ್ಯರು, ಮ್ಯಾಜಿಸ್ಟ್ರೇಟ್ ಕೋರ್ಟ್ ಘಟಕದಿಂದ ಐದು ಮಂದಿ, ಮೇಯೋ ಹಾಲ್ ಕೋರ್ಟ್ ಘಟಕದಿಂದ ಐವರು ಸದಸ್ಯರು, ಕೋರ್ಟ್ ಘಟಕದಿಂದ ಐದು ಮಂದಿ ಸದಸ್ಯರು ಬೆಂಗಳೂರು ವಕೀಲರ ಸಂಘದಲ್ಲಿ ಪ್ರಾತಿನಿಧ್ಯ ಹೊಂದಲಿದ್ದಾರೆ.
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಫೆಬ್ರವರಿ ಎರಡರಂದು ಮತದಾನ ನಡೆಯಲಿದೆ. ಚುನಾವಣೆ ಕಾರ್ಯದಲ್ಲಿ ಸುಮಾರು 800 ಮಂದಿ ಕಾರ್ಯನಿರ್ವಹಿಸಲಿದ್ದು, ಭದ್ರತೆಯ ದೃಷ್ಟಿಯಿಂದ ಸಿಟಿ ಸಿವಿಲ್ ಕೋರ್ಟ್ ಒಳಗೆ ಮತ್ತು ಹೊರಗೆ ಸಿಸಿಟಿವಿ ಅಳವಡಿಸಲಾಗಿದೆ ಸರಕಾರಿ ಕಲಾ ಕಾಲೇಜಿನಲ್ಲಿ ಚುನಾವಣೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.