ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಹೋರಾಟಕ್ಕೆ ಹಿನ್ನಡೆ: ಶಾಸಕರ ಪ್ರಶ್ನೆಗೆ ಮುಖ್ಯಮಂತ್ರಿ ನೀಡಿದ ಉತ್ತರವೇನು..?
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಹೋರಾಟಕ್ಕೆ ಹಿನ್ನಡೆ: ಶಾಸಕರ ಪ್ರಶ್ನೆಗೆ ಮುಖ್ಯಮಂತ್ರಿ ನೀಡಿದ ಉತ್ತರವೇನು..?
ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲಾಗುತ್ತದೆ ಎಂಬ ವಾದಕ್ಕೆ ರಾಜ್ಯ ಸರ್ಕಾರ ತೆರೆ ಎಳೆದಿದೆ.
ಬೆಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪೀಠ ಸ್ಥಾಪನೆಯ ಬಗ್ಗೆ ಮೂಡಬಿದ್ರೆಯ ಬಿಜೆಪಿ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ಅವರು ಮುಖ್ಯಮಂತ್ರಿಗೆ ಸದನದಲ್ಲಿ ಲಿಖಿತವಾಗಿ ಪ್ರಶ್ನೆ ಮಾಡಿದ್ದರು. ಶಾಸಕರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಇಂತಹ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಹೇಳಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಉಡುಪಿ ಮಡಿಕೇರಿ ಉತ್ತರ ಕನ್ನಡ ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಹೈಕೋರ್ಟ್ ನ್ಯಾಯ ಪೀಠ ಸ್ಥಾಪನೆಗೆ ಈ ವರ್ಷದುದ್ದಕ್ಕೂ ಪ್ರತಿಭಟನೆ ಹಾಗೂ ವ್ಯಾಪಕ ಒತ್ತಾಯ, ಬೇಡಿಕೆ ಕೇಳಿ ಬಂದಿತ್ತು.
ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನೇತೃತ್ವದ ಸರ್ವ ಪಕ್ಷಗಳ ಜನಪ್ರತಿನಿಧಿಗಳು ಮತ್ತು ವಕೀಲರ ನಿಯೋಗ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಮಂಗಳೂರು ವಕೀಲರ ಸಂಘ ಕರಾವಳಿ ಮಲೆನಾಡು ಭಾಗದ ವಿವಿಧ ತಾಲೂಕುಗಳ ವಕೀಲರ ಸಂಘಗಳು ಕೂಡ ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದ್ದರು ಎಂಬುದನ್ನು ಸ್ಮರಿಸಬಹುದು.