ಚಾಲ್ತಿಯಲ್ಲಿರುವ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಲಾಗದು: ಕರ್ನಾಟಕ ಹೈಕೋರ್ಟ್
ಚಾಲ್ತಿಯಲ್ಲಿರುವ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಲಾಗದು: ಕರ್ನಾಟಕ ಹೈಕೋರ್ಟ್
ಚುನಾವಣಾ ನೀತಿ ಸಂಹಿತೆ ಜಾಲ್ತಿಯಲ್ಲಿರುವಾಗ ಚುನಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವಂತಹ ಆದೇಶವನ್ನು ಯಾವುದೇ ನ್ಯಾಯಾಲಯ ಮಾಡುವಂತಿಲ್ಲ ಎಂಬುದು ಸ್ಥಾಪಿತ ಕಾನೂನು. ಸುಪ್ರೀಂ ಕೋರ್ಟು ರೂಪಿಸಿರುವ ಈ ಕಾನೂನು ಸೊಸೈಟಿಗಳು ಮತ್ತು ಸಂಸ್ಥೆಗಳಿಗೂ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆರ್ ದೇವದಾಸ್ ಅವರಿಂದ ಏಕ ಸದಸ್ಯ ನ್ಯಾಯ ಪೀಠ ಈ ತೀರ್ಪು ನೀಡಿದೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 33%ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.
ಬೆಂಗಳೂರು ವಕೀಲರ ಸಂಘದಲ್ಲಿ ಮಹಿಳಾ ವಕೀಲರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬುದನ್ನು ಬೆಂಗಳೂರು ವಕೀಲರ ಸಂಘಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಮಹಿಳಾ ವಕೀಲರ ಒಕ್ಕೂಟ ಈ ಅರ್ಜಿಯನ್ನು ಸಲ್ಲಿಸಿತ್ತು. ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಆರು ತಿಂಗಳ ಹಿಂದೆ ಮಹಿಳಾ ವಕೀಲರಿಗೆ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಈ ಅರ್ಜಿಯನ್ನು ಎಎಬಿ ಪರಿಗಣಿಸಿಲ್ಲ. ಈಗ ಅವಕಾಶ ತಪ್ಪಿದರೆ ಮತ್ತೆ 3 ವರ್ಷ ಕಾಯಬೇಕಾಗುತ್ತದೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿದ ವಕೀಲರು ವಾದ ಮಂಡಿಸಿದರು.
ಬೆಂಗಳೂರು ವಕೀಲರ ಸಂಘದ ಪರ ವಾದ ಮಂಡಿಸಿದ ನಿಕಟ ಪೂರ್ವ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬೈಲಾ ತಿದ್ದುಪಡಿ ಯಾಗದೆ ಮೀಸಲಾತಿ ಕಲ್ಪಿಸಲಾಗದು ಆದರೂ ಮಹಿಳಾ ವಕೀಲರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಆಡಳಿತ ಮಂಡಳಿಯ ಅವಧಿಯು ಕೊನೆಗೊಂಡಿರುವುದರಿಂದ ಈ ಹಂತದಲ್ಲಿ ಎ ಎ ಬಿ ಪರವಾಗಿ ಯಾವುದೇ ಹೇಳಿಕೆ ನೀಡಲಾಗದು ಎಂದು ನ್ಯಾಯ ಪೀಠಕ್ಕೆ ಮನವಿ ಮಾಡಿದರು