ಕೇಸಿನ ಸ್ಥಿತಿಗತಿ ತಿಳಿಯುವುದು ಕಕ್ಷಿದಾರರ ಹೊಣೆಗಾರಿಕೆ- ವಿಳಂಬಕ್ಕೆ ವಕೀಲರನ್ನು ದೂರುವುದು ಸರಿಯಲ್ಲ: ಹೈಕೋರ್ಟ್ ವಿಭಾಗೀಯ ಪೀಠ
ಕೇಸಿನ ಸ್ಥಿತಿಗತಿ ತಿಳಿಯುವುದು ಕಕ್ಷಿದಾರರ ಹೊಣೆಗಾರಿಕೆ- ವಿಳಂಬಕ್ಕೆ ವಕೀಲರನ್ನು ದೂರುವುದು ಸರಿಯಲ್ಲ: ಹೈಕೋರ್ಟ್ ವಿಭಾಗೀಯ ಪೀಠ
ಪ್ರಕರಣವನ್ನು ವಕೀಲರಿಗೆ ವಹಿಸಿದ ಬಳಿಕ ಆ ಪ್ರಕರಣದ ನಿತ್ಯದ ವಿಚಾರಣೆಯ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಪ್ರಕರಣವನ್ನು ಶ್ರದ್ಧೆಯಿಂದ ಮುಂದುವರಿಸುವುದು ಕಕ್ಷಿದಾರರ ಹೊಣೆಗಾರಿಕೆ. ಕೇಸು ನಡೆಸುವ ಕರ್ತವ್ಯ ಕೇವಲ ವಕೀಲರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ದೆಹಲಿ ಹೈಕೋರ್ಟ್ ನ ವಿಭಾಗಿಯ ಪೀಠ ತೀರ್ಪು ನೀಡಿದೆ.
"ರಾಹುಲ್ ಮಾವಾಯಿ Vs ಭಾರತ ಒಕ್ಕೂಟ" ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾ. ಸಿ ಹರಿಶಂಕರ್ ಮತ್ತು ನ್ಯಾ. ಅನುಪ್ ಕುಮಾರ್ ಮೆಂಡಿರಟ್ಟ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ನ್ಯಾಯಾಲಯಗಳನ್ನು ಸಂಪರ್ಕಿಸುವಲ್ಲಿನ ನಿರ್ಲಕ್ಷ ಮತ್ತು ವಕೀಲರ ಹೆಗಲಿಗೆ ಹೊಣೆ ಹೊರಿಸುವ ಅಭ್ಯಾಸವನ್ನು ಬಲವಾಗಿ ತಿರಸ್ಕರಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಒಂದು ವೇಳೆ, ವಕೀಲರಿಂದಲೇ ಆದ ವಿಳಂಬ ಇದ್ದ ಪಕ್ಷದಲ್ಲಿ ಸಂಬಂಧಪಟ್ಟ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿ ವಿಳಂಬ ವಿವರಿಸಲು ಯತ್ನಿಸುವುದು ಸುಲಭದ ಮಾರ್ಗವಾಗಿದೆ ಎಂದು ನ್ಯಾಯಪೀಠ ಸಲಹೆ ನೀಡಿದೆ.
ವಕೀಲರಿಗೆ ಪ್ರಕರಣ ವಹಿಸಿದ ಬಳಿಕ ದಾವೆದಾರ ಆ ಪ್ರಕರಣದ ಸ್ಥಿತಿಗತಿ ತಿಳಿಯುವ ತನ್ನ ಹೊಣೆಗಾರಿಕೆಯಿಂದ ವಿಮುಖನಾಗುವಂತಿಲ್ಲ ಎಂದು ನ್ಯಾಯಾಲಯ ಅರ್ಜಿದಾರರಿಗೆ ಬುದ್ಧಿವಾದ ಹೇಳಿದೆ.
ಪ್ರಕರಣ ಮುಂದುವರಿಸಲು ತಮ್ಮ ವಕೀಲರು ನಿರ್ಲಕ್ಷ ವಹಿಸಿದ್ದಾರೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ. ಆರು ವರ್ಷಗಳ ವಿಳಂಬದ ಬಳಿಕ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿ, ಆ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಅಥವಾ ಅದನ್ನು ವಹಿಸಿಕೊಂಡಿರುವ ವಕೀಲರು ವಿಳಂಬ, ನಿರ್ಲಕ್ಷ್ಯ ಅಥವಾ ನಿರಾಸಕ್ತಿ ಹೊಂದಿದ್ದಾರೆ ಎಂಬ ಆಧಾರದ ಮೇಲಷ್ಟೇ ನ್ಯಾಯಾಲಯದ ಕದ ತಟ್ಟಿರುವುದು ಮತ್ತು ಆರು ವರ್ಷಗಳ ವಿಳಂಬಕ್ಕೆ ಸಮರ್ಪಕ ಕಾರಣವನ್ನು ವಿವರಿಸದೆ ಇರುವ ಅನಾರೋಗ್ಯಕರ ಅಭ್ಯಾಸವನ್ನು ತಿರಸ್ಕರಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ಸರಕಾರಿ ಹುದ್ದೆಗೆ ಸೇರಲು ದಾವೆದಾರನಿಗೆ ಇರುವ ಅರ್ಹತೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 2016ರಲ್ಲಿ ಸಲ್ಲಿಸಲಾಗಿದ್ದ ಮನವಿಯನ್ನು 2018ರಲ್ಲಿ ನ್ಯಾಯ ಮಂಡಳಿ ವಜಾಗೊಳಿಸಿತು. ನಂತರ ಹೈಕೋರ್ಟ್ ನಲ್ಲಿ ಇದನ್ನು ಪ್ರಶ್ನಿಸಲು ದೆಹಲಿಯ ವಕೀಲರೊಬ್ಬರ ಬಳಿಗೆ ಅರ್ಜಿದಾರರು ತೆರಳಿದ್ದರು. ತಾನು ವಕೀಲರೊಂದಿಗೆ ದೂರವಾಣಿಯಲ್ಲಿ ಹಲವು ಬಾರಿ ಸಂವಾದ ನಡೆಸಿದ್ದೆ. ಪ್ರಕರಣದ ಪ್ರಗತಿ ಕುರಿತಂತೆ ವಕೀಲರು ತಪ್ಪು ಮಾಹಿತಿ ನೀಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ವೈಯಕ್ತಿಕ ಹಾಜರಾತಿ ಸಾಧ್ಯವಾಗಿರಲಿಲ್ಲ ಎಂದು ದಾವೇದಾರ ಅರ್ಜಿಯಲ್ಲಿ ತಿಳಿಸಿದ್ದರು.
ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿಲ್ಲ ಎಂಬುದು ಕಳೆದ ಆಗಸ್ಟ್‌ನಲ್ಲಷ್ಟೇ ತನಗೆ ತಿಳಿದು ಬಂದಿತ್ತು. ನಂತರ ನನ್ನ ಕೇಸು ನಡೆಸುವ ವಕೀಲರ ವಿರುದ್ಧ ಜಿಲ್ಲಾ ವಕೀಲರ ಸಂಘಕ್ಕೆ ದೂರು ನೀಡಿದ್ದೆ. ಈ ಕಾರಣಕ್ಕೆ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಲು ವಿಳಂಬವಾಗಿದೆ. ಈ ವಿಳಂಬವನ್ನು ಮನ್ನಿಸಬೇಕು ಎಂದು ಅರ್ಜಿದಾರರು ಕೋರಿದರು.
ಆದರೆ, ವಕೀಲರದ್ದು ಮಾತ್ರವಲ್ಲದೆ ಪ್ರಕರಣವನ್ನು ಶ್ರದ್ಧೆಯಿಂದ ಮುಂದುವರಿಸುವ ಕರ್ತವ್ಯ ಮೊಕದ್ದಮೆ ಹೂಡುವವರದ್ದೂ ಆಗಿದೆ ಎಂದು ಹೇಳಿದ ನ್ಯಾಯ ಪೀಠ ಅರ್ಜಿಯನ್ನು ತಿರಸ್ಕರಿಸಿತ್ತು.