ದಾಂಪತ್ಯ ವಿವಾದ: ಕೌಟುಂಬಿಕ ಪ್ರಕರಣಗಳಲ್ಲಿ ಪತ್ನಿಯಿಂದಲೂ ಕ್ರೌರ್ಯ ನಡೆಯಬಹುದು: ಕರ್ನಾಟಕ ಹೈಕೋರ್ಟ್
ದಾಂಪತ್ಯ ವಿವಾದ: ಕೌಟುಂಬಿಕ ಪ್ರಕರಣಗಳಲ್ಲಿ ಪತ್ನಿಯಿಂದಲೂ ಕ್ರೌರ್ಯ ನಡೆಯಬಹುದು: ಕರ್ನಾಟಕ ಹೈಕೋರ್ಟ್
ದಾಂಪತ್ಯ ವಿವಾದಗಳು ಪತ್ನಿಯಿಂದಲೂ ಉಂಟಾಗಬಹುದು. ಕೌಟುಂಬಿಕ ಪ್ರಕರಣಗಳಲ್ಲಿ ಪುರುಷರು ತಮ್ಮ ಪತ್ನಿಯಿಂದಲೂ ಕ್ರೌರ್ಯಕ್ಕೊಳಗಾಗಬಹುದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಡಾ. ಚಿಲ್ಲಾಕುರ್ ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನಿಕವಾಗಿ ಪುರುಷರಷ್ಟೇ ಸಮಾನ ಹಕ್ಕುಗಳು ಮಹಿಳೆಯರಿಗೆ ಇವೆ. ವಾಸ್ತವ ವಿಚಾರ ಏನಂದರೆ, ಬಹುತೇಕ ಪ್ರಕರಣಗಳಲ್ಲಿ ಮಹಿಳೆಯರು ಹೆಚ್ಚು ಬಾಧಿತರಾಗಿರುತ್ತಾರೆ. ಅದರ ಅರ್ಥ ಮಹಿಳೆಯರಿಂದ ಪುರುಷರ ಮೇಲೆ ಕ್ರೌರ್ಯ ಆಗುವುದಿಲ್ಲ ಎಂದಲ್ಲ ಎಂದು ನ್ಯಾಯಪೀಠ ಹೇಳಿದೆ.
ಲಿಂಗ ತಾರತಮ್ಯವಿಲ್ಲದ ಸಮಾಜ ನಿರ್ಮಾಣವಾಗಬೇಕಾಗಿದೆ. ಇಂತಹ ಸಮಾಜವು ಲಿಂಗಾಧಾರಿತ ಕರ್ತವ್ಯಗಳನ್ನು ಪ್ರತ್ಯೇಕಗೊಳಿಸುವುದನ್ನು ನಿಷೇಧಿಸುವ ಗುರಿ ಹೊಂದಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ವೈವಾಹಿಕ ವಿವಾದಗಳಲ್ಲಿ ಸಾಮಾನ್ಯವಾಗಿ ಮಹಿಳೆಯರೇ ಹೆಚ್ಚು ಸಂತ್ರಸ್ತರಾಗಿರುತ್ತಾರೆ. ಪುರುಷರು ಸಹ ಕೆಲವೊಂದು ಅಂತಹ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರ ಮಹಿಳೆ, ತನ್ನ ಮನೆಯಿಂದ ನ್ಯಾಯಾಲಯವು 130 ಕಿಲೋಮೀಟರ್ ದೂರದಲ್ಲಿದೆ. ವಿಚಾರಣೆಗೆ ಹೋಗಿ ಬರಲು ಕಷ್ಟವಾಗುತ್ತದೆ. ಹೀಗಾಗಿ ಪ್ರಕರಣದ ವರ್ಗಾವಣೆ ಮಾಡಬೇಕು ಎಂದು ವಿಚ್ಛೇದನ ಪ್ರಕರಣ ಒಂದರ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ ವಿಚ್ಛೇದನ ನ್ಯಾಯಾಂಗ ಪ್ರಕ್ರಿಯೆಯನ್ನು ಶಿವಮೊಗ್ಗ ಜಿಲ್ಲಾ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಕೋರಿ ಮಹಿಳೆ ಪತ್ನಿ ಅರ್ಜಿ ಸಲ್ಲಿಸಿದ್ದರು.
ವೈವಾಹಿಕ ಸಂಬಂಧದಿಂದ ಜನಿಸಿರುವ ಏಳು ಮತ್ತು ಒಂಬತ್ತು ವರ್ಷದ ಎರಡು ಮಕ್ಕಳನ್ನು ಪ್ರತಿವಾದಿ ಪತಿಯೇ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಊಟ ತಯಾರಿಸಿ ಉಣಬಡಿಸುವುದು ಶಾಲೆಗೆ ಕಳುಹಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಪತಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಿದರೆ ಅಲ್ಲಿಗೆ ತೆರಳಲು ಪತಿಯವರು ಸಾಕಷ್ಟು ಓಡಾಟ ಮಾಡಬೇಕಾಗುತ್ತದೆ. ಇದು ಅವರಿಗೆ ಮತ್ತು ಅವರ ಮಕ್ಕಳಿಗೂ ಸಮಸ್ಯೆ ಉಂಟುಮಾಡಲಿದೆ ಎಂದು ವಾದಿಸಿದ್ದರು.
ಈ ವಾದವನ್ನು ಒಪ್ಪಿದ ನ್ಯಾಯಪೀಠ ಮಹಿಳಾ ಅರ್ಜಿದಾರರು ಪ್ರಕರಣ ವರ್ಗಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾಸ್ತವಿಕ ವಿಚಾರಗಳನ್ನು ಪರಿಶೀಲಿಸದೆ ನ್ಯಾಯಾಲಯವು ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೇಳಿತು.