ಸಮ್ಮತಿ ವಿಚ್ಚೇದನ ಪ್ರಕರಣ: ಷರತ್ತು ಪ್ರಕಾರ ಸೈಟ್ ಸಿಗುತ್ತಲೇ ಪತ್ನಿ ಯೂ ಟರ್ನ್- ವಿಚಾರಣೆಗೆ ಬರದಿದ್ದರೂ ಡೈವರ್ಸ್ ನೀಡಿದ ಕರ್ನಾಟಕ ಹೈಕೋರ್ಟ್
ಸಮ್ಮತಿ ವಿಚ್ಚೇದನ ಪ್ರಕರಣ: ಷರತ್ತು ಪ್ರಕಾರ ಸೈಟ್ ಸಿಗುತ್ತಲೇ ಪತ್ನಿ ಯೂ ಟರ್ನ್- ವಿಚಾರಣೆಗೆ ಬರದಿದ್ದರೂ ಡೈವರ್ಸ್ ನೀಡಿದ ಕರ್ನಾಟಕ ಹೈಕೋರ್ಟ್
ಸಮ್ಮತಿಯ ವಿಚ್ಚೇದನದ ಪ್ರಕರಣವೊಂದರಲ್ಲಿ ಪೂರ್ವ ಷರತ್ತಿನ ಪ್ರಕಾರ ಪತಿಯಿಂದ ಸೈಟ್ ಪಡೆದುಕೊಂಡು ಆಸ್ತಿ ಸಿಗುತ್ತಲೇ ಯೂ ಟರ್ನ್ ಹೊಡೆದ ಪತ್ನಿಗೆ ಕರ್ನಾಟಕ ಹೈಕೋರ್ಟ್ ಸರಿಯಾದ ಬುದ್ದಿ ಕಲಿಸಿದೆ. ಆಕೆ ವಿಚಾರಣೆಯಿಂದ ದೂರ ಉಳಿದು ವಿಚಾರಣೆಗೆ ಬರದಿದ್ದರೂ ಡೈವರ್ಸ್ ನೀಡಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದ್ದು, ಪತಿಗೆ ರಿಲೀಫ್ ದೊರೆತಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪರಸ್ಪರ ಸಮ್ಮತಿ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ. ಶರತ್ತಿನ ಪ್ರಕಾರ ಸೈಟ್ ಪಡೆದು ನಂತರ ಪ್ರಕರಣದಲ್ಲಿ ಗೈರು ಹಾಜರಾಗುವ ಮೂಲಕ ಶರತ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ಪತ್ನಿಯಿಂದ ಈ ಮೂಲಕ ನ್ಯಾಯಪೀಠ ಸರಿಯಾದ ಪಾಠ ಕಲಿಸಿದ್ದು, ಪತಿಯ ಮನವಿಯಂತೆ ದಂಪತಿಗೆ ವಿಚ್ಛೇದನ ನೀಡಿ ತೀರ್ಪು ಪ್ರಕಟಿಸಿದೆ.
ದಂಪತಿ ಪೂರ್ಣ ಸಮ್ಮತಿಯಿಂದಲೇ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಅಡಿಯಲ್ಲಿ ಪರಸ್ಪರ ಒಪ್ಪಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಹಾಕುವ ಸಂದರ್ಭದಲ್ಲಿ ದಂಪತಿ ಮಾಡಿಕೊಂಡಿದ್ದ ಶರತ್ತಿನ ಪ್ರಕಾರ ಪತ್ನಿ ಪತಿಯಿಂದ ನಿವೇಶನವನ್ನು ಪಡೆದುಕೊಂಡಿದ್ದಾರೆ. ವಿಚ್ಚೇದನಕ್ಕೆ ಸಮ್ಮತಿಸಿ ಪಡೆದ ನಿವೇಶನವನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾರಾಟ ಮಾಡಿದ್ದಾರೆ.
ಆ ಬಳಿಕ, ಸಮ್ಮತಿ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಗೈರು ಹಾಜರಾಗುವ ಮೂಲಕ ವಿಚ್ಛೇದನಕ್ಕೆ ಅಸಮ್ಮತಿ ತೋರಿದ್ದಾರೆ. ಸಮ್ಮತಿ ಮೇರೆಗೆ ದಂಪತಿ ವಿಚ್ಛೇದನ ಕೋರಿದಾಗ ದಂಪತಿ ಇಬ್ಬರು ಹಾಜರಾಗಬೇಕು ಎಂದು ಕೌಟುಂಬಿಕ ನ್ಯಾಯಾಲಯ ಸದರಿ ಅರ್ಜಿಯನ್ನು ವಜಾ ಗೊಳಿಸಿತ್ತು.
ದಂಪತಿ ಸಮ್ಮತಿಯಿಂದಲೇ ಅರ್ಜಿ ಸಲ್ಲಿಸಿದ ಬಳಿಕ, ಮೋಸ, ವಂಚನೆ, ಬಲವಂತ ಅಥವಾ ತಪ್ಪು ವಿವರಣೆ ನೀಡುವ ಕಾರಣಗಳನ್ನು ಹೊರತುಪಡಿಸಿ ಇತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅವಕಾಶ ಇಲ್ಲ. ಆದರೂ ಪತ್ನಿಯ ಗೈರುಹಾಜರು ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾ ಮಾಡಲಾಗಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಇಂತಹ ಸಂದರ್ಭದಲ್ಲಿ ಪತಿಯನ್ನು ಅಸಹಾಯಕ ಸ್ಥಿತಿಯಲ್ಲಿ ಇರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೆ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ವಿಚಾರಣೆಗೆ ಆಕ್ಷೇಪ ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ, ಪತ್ರಿಕಾ ಪ್ರಕಟಣೆ ಹೊರಡಿಸಿದರೂ ಯಾವುದೇ ಫಲ ನೀಡಿಲ್ಲ. ಪತ್ನಿ ಉದ್ದೇಶಪೂರ್ವಕವಾಗಿ ಹೈಕೋರ್ಟ್ ಮುಂದೆ ಹಾಜರಾಗಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
ಪತ್ನಿ ಇಷ್ಟ ಬಂದ ರೀತಿಯಲ್ಲಿ ವರ್ತಿಸಿದಾಗ ಮತ್ತು ನ್ಯಾಯಾಲಯದಿಂದ ದೂರ ಉಳಿದಾಗ ಮೇಲ್ಮನವಿದಾರರ ಹಕ್ಕುಗಳನ್ನು ನಿರಾಕರಿಸಲಾಗದು. ಹಾಗಾಗಿ ವಿಚ್ಛೇದನ ಮಂಜೂರು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಘಟನೆ ವಿವರ:
2005ರಲ್ಲಿ ವಿವಾಹವಾಗಿದ್ದ ದಂಪತಿಗೆ ಓರ್ವ ಗಂಡು ಮಗುವಿದ್ದು, ವೈಮನಸ್ಯದಿಂದ ಪತ್ನಿ 2010ರಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ನಂತರ ಪತಿ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟಿಗೆ ಮೊರೆ ಹೋಗಿದ್ದರು. ನಂತರ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಿದರು.
ಒಮ್ಮತದ ವಿಚ್ಛೇದನ ಸಲ್ಲಿಸಿದ್ದ ಅರ್ಜಿಯಲ್ಲಿ ಮಾಡಿಕೊಂಡಿದ್ದ ಶರತ್ತಿನಂತೆ ಪತಿಯು ಯಲಹಂಕದ ಬಳಿ ಪತ್ನಿಗೆ ನಿವೇಶನ ನೀಡಿದ್ದರು. ಜೊತೆಗೆ ಪತಿಯ ವಿರುದ್ಧ ಹೂಡಲಾಗಿದ್ದ ಇತರ ಪ್ರಕರಣಗಳನ್ನು ಪತ್ನಿಯ ಹಿಂದಕ್ಕೆ ಪಡೆಯುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ಸೈಟು ತನ್ನ ಹೆಸರಿಗೆ ಬಂದ ನಂತರ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13ರ ಅಡಿ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ಅಸಮ್ಮತಿ ಸೂಚಿಸಿದ್ದರು.
ಪ್ರಕರಣ: ಕಾಳೇಶ್ ವಿಜಯ್ ಕುಮಾರ್ Vs ರೇಖಾ ಕೃಷ್ಣಪ್ಪ
ಕರ್ನಾಟಕ ಹೈಕೋರ್ಟ್, MFA 8506/2022, Dated 20-12-2024