ಲೈಂಗಿಕ ದೌರ್ಜನ್ಯ ನಡೆಯದೆ ಲೈಂಗಿಕ ಸಂಭೋಗ ಎಂದು ಕಲ್ಪಿಸಲಾಗದು: ಪೋಕ್ಸೊ ಆರೋಪಿ ಖುಲಾಸೆಗೊಳಿಸಿದ ಹೈಕೋರ್ಟ್
ಲೈಂಗಿಕ ದೌರ್ಜನ್ಯ ನಡೆಯದೆ ಲೈಂಗಿಕ ಸಂಭೋಗ ಎಂದು ಕಲ್ಪಿಸಲಾಗದು: ಪೋಕ್ಸೊ ಆರೋಪಿ ಖುಲಾಸೆಗೊಳಿಸಿದ ಹೈಕೋರ್ಟ್
ಪೋಕ್ಸೋ ಕಾಯ್ದೆಯ ಸೆಕ್ಷನ್ 3 ಅಥವಾ ಭಾರತೀಯ ದಂಡ ಸಮಿತಿ ಸೆಕ್ಷನ್ 376ರ ಅಡಿಯಲ್ಲಿ ಅಪರಾಧ ಸಾಬೀತುಪಡಿಸಲು "ಸಂಬಂಧ ಏರ್ಪಟ್ಟಿತು" ಎಂಬ ಪದ ಬಳಕೆ ಸಾಲದು. ಪೋಕ್ಸೋ ಕಾಯ್ದೆ ಅಡಿ ಬಾಲಕಿ ಅಪ್ರಾಪ್ತ ವಯಸ್ಕರ ಒಪ್ಪಿಗೆ ಪ್ರಸ್ತುತವಾಗಿದ್ದರೂ, ಲೈಂಗಿಕ ದೌರ್ಜನ್ಯ ನಡೆಯದೇ ಇರುವಾಗ, ದೈಹಿಕ ಸಂಬಂಧ ಎಂಬ ಪದಗುಚ್ಛವನ್ನು "ಲೈಂಗಿಕ ಸಂಭೋಗ" ಎಂದು ತನ್ನಿಂತಾನೆ ಪರಿವರ್ತಿಸಿ ಅರ್ಥೈಸಲಾಗದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ ಅಡಿ ಬಂಧಿತನಾಗಿದ್ದ ಆರೋಪಿಯನ್ನು ಹೈಕೋರ್ಟ್ ಆರೋಪ ಮುಕ್ತಗೊಳಿಸಿದೆ.
ಶಹಜಾನ್ ಅಲಿ, ಪರೋಕರ್ ಬಾನು ಖಾತುನ್ ಮೂಲಕ Vs ಶೋ ಪಿ.ಎಸ್. ಮಧು ವಿಹಾರ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಪ್ರತಿಭಾ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಂತ್ರಸ್ತೆ ವಾಸ್ತವವಾಗಿ 'ದೈಹಿಕ ಸಂಬಂಧ' ಎಂಬ ಪದಗುಚ್ಛ ಬಳಸಿದ್ದರು. ಆದರೆ ಈ ಪದವನ್ನು ಆಕೆ ಹೇಗೆ ಅರ್ಥೈಸಿಕೊಂಡಿದ್ದಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆಕೆ ಅಪ್ರಾಪ್ತ ವಯಸ್ಕಳಾಗಿದ್ದರೆ ಒಪ್ಪಿಗೆ ಅಪಪ್ರಸ್ತುತವಾಗಿದ್ದರೂ ಲೈಂಗಿಕ ದೌರ್ಜನ್ಯ ನಡೆಯದೇ ಇರುವಾಗ 'ದೈಹಿಕ ಸಂಬಂಧ' ಎಂಬ ಪದ ಗುಚ್ಚವನ್ನು 'ಲೈಂಗಿಕ ಸಂಭೋಗ' ಎಂದು ಅರ್ಥಮಾಡಿಕೊಳ್ಳಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ಈ ಪ್ರಕರಣದಲ್ಲಿ ದೂರುದಾರ ಸಂತ್ರಸ್ತೆಯು ಸ್ವಯಂ ಪ್ರೇರಣೆಯಿಂದ ಮೇಲ್ಮನವಿದಾರರ ಜೊತೆ ತೆರಳಿದ್ದಾರೆ ಎಂಬ ಅಂಶವನ್ನು ಪ್ರಶ್ನಿಸಲಾಗಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೇ ವಿನಃ ಮೂಲಕ ಊಹೆಯ ಮೂಲಕ ಅದನ್ನು ನಿರ್ಣಯಿಸಲಾಗದು ಎಂದು ನ್ಯಾಯ ಪೀಠ ಹೇಳಿದೆ ಮತ್ತು ಇಂತಹ ಪ್ರಕರಣಗಳಲ್ಲಿ 'ಸಂಶಯದ ಲಾಭ'ವು (Benifit of Doubt) ಆರೋಪಿಯ ಪರವಾಗಿಯೇ ಇರುತ್ತದೆ ಎಂಬುದನ್ನು ಅದು ತಿಳಿಸಿದೆ.
ಪಾಟೀ ಸವಾಲಿನಲ್ಲಿ ಸಂತ್ರಸ್ತೆ ತನ್ನ ಮೇಲೆ ದೈಹಿಕ ಹಲ್ಲೆ ಇಲ್ಲವೇ ತಪ್ಪು ಕೆಲಸ ನಡೆದಿಲ್ಲ ಎಂದು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಗಾಯ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂಬುದನ್ನು ಹೈಕೋರ್ಟ್ ಗಮನಿಸಿತು.
ವಿಚಾರಣಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಯಾವುದೇ ತರ್ಕ ಒದಗಿಸಿಲ್ಲ ಎಂಬುದನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮೇಲ್ಮನವಿದಾರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವಿಚಾರಣಾ ನ್ಯಾಯಾಲಯ ಯಾವ ರೀತಿ ತೀರ್ಮಾನಿಸಿತು ಎಂಬುದು ಅಸ್ಪಷ್ಟವಾಗಿದೆ.
ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬ ಅಂಶವು ಕಾಯ್ದೆಯ ಒಳ ಪ್ರವೇಶಿಕೆಯಲ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ತೀರ್ಮಾನಕ್ಕೆ ಕಾರಣವಾಗದು ಎಂದ ನ್ಯಾಯಾಲಯ ಅಭಿಪ್ರಾಯಪಟ್ಟು, ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು.