ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಗೆ ಶೇ. 20ರಷ್ಟು ಪರಿಹಾರದ ಆದೇಶ ಕಡ್ಡಾಯವಲ್ಲ: ನ್ಯಾಯಿಕ ವಿವೇಚನೆ ಮುಖ್ಯ- ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ಫಿರ್ಯಾದಿಗೆ ಶೇ. 20ರಷ್ಟು ಪರಿಹಾರದ ಆದೇಶ ಕಡ್ಡಾಯವಲ್ಲ: ನ್ಯಾಯಿಕ ವಿವೇಚನೆ ಮುಖ್ಯ ಎಂದ ಕರ್ನಾಟಕ ಹೈಕೋರ್ಟ್
ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 143 ಎ ಅಡಿ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿ ವ್ಯಕ್ತಿ ದೂರುದಾರರಿಗೆ ಚೆಕ್ ಮೊತ್ತದ ಶೇಕಡ 20ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಚಕ್ ಮೊತ್ತದ ಶೇಕಡ 20ರಷ್ಟು ಮಧ್ಯಂತರ ಪರಿಹಾರವಾಗಿ ನೀಡುವಂತೆ ವಿಚಾರಣ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ವರ್ಗಾವಣೀಯ ಪತ್ರಗಳ ಕಾಯ್ದೆ 1881ರ ಸೆಕ್ಷನ್ 143 ಎ ಅಡಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನೀಡುವಂತೆ ಆರೋಪಿಗೆ ಆದೇಶಿಸಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅಧಿಕಾರ ನೀಡಲಾಗಿದೆ. ಚೆಕ್ ನೀಡಿದ ವ್ಯಕ್ತಿ ಅಥವಾ ಆರೋಪಿ ತನ್ನ ಆರೋಪ ಒಪ್ಪಿಕೊಳ್ಳದೆ ಇದ್ದಾಗ ದೂರುದಾರರಿಗೆ ಶೇಕಡ 20ರಷ್ಟು ಪರಿಹಾರ ನೀಡಲು ಕೋರ್ಟು ಆದೇಶ ಮಾಡಬಹುದಾಗಿದೆ.
ಮಧ್ಯಂತರ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದಾಗ, ಆದೇಶ ಹೊರಡಿಸಿದ 60 ದಿನಗಳ ಒಳಗೆ ಆರೋಪಿ ಈ ಪರಿಹಾರದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆರೋಪಿಯ ಮನವಿಯ ಮೇರೆಗೆ ಈ ಅವಧಿಯನ್ನು ಇನ್ನೂ 30 ದಿನಗಳವರೆಗೆ ವಿಸ್ತರಿಸಬಹುದಾಗಿದೆ. ಹೀಗೆ ಮಧ್ಯಂತರ ಪರಿಹಾರ ರೂಪದಲ್ಲಿ ಪಡೆದ ಮೊತ್ತವನ್ನು ಆರೋಪಿಯು ಆರೊಪ ಮುಕ್ತಗೊಂಡ ಸಂದರ್ಭದಲ್ಲಿ ಫಿರ್ಯಾದಿ 60 ರಿಂದ 90 ದಿನಗಳ ಒಳಗೆ ಬಡ್ಡಿ ಸಹಿತ ವಾಪಸ್ ನೀಡಬೇಕಾಗುತ್ತದೆ.
ಹೀಗೆ ಮಧ್ಯಂತರ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದರೆ, ಈ ಆದೇಶವನ್ನು ಆರೋಪಿಯು ಪಾಲಿಸದೇ ಇದ್ದರೆ, ದೂರುದಾರನು ಸಿಆರ್ಪಿಸಿ ಸೆಕ್ಷನ್ 420 ಅಥವಾ 357ರ ಅಡಿಯಲ್ಲಿ ಆರೋಪಿಯ ಆಸ್ತಿ ಜಪ್ತಿಗೆ ಕೋರಿ ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಕಾನೂನಿನಲ್ಲಿ ಅವಕಾಶ ಇದೆ ಎಂದ ಮಾತ್ರಕ್ಕೆ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್‌ನ ಸೆಕ್ಷನ್ 143 ಎ ನಿಯಮವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಯಥಾವತ್ತಾಗಿ ಜಾರಿಗೆ ಮಾಡಲು ಬರುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಚೆಕ್ ಬೌನ್ಸ್ ವಿಚಾರವಾಗಿ ದೂರು ದಾಖಲಿಸಿರುವ ವ್ಯಕ್ತಿಗೆ ಪರಿಹಾರ ಪಾವತಿಸಲು ಆರೋಪಿಗೆ ಆದೇಶಿಸುವ ಮುನ್ನ ಮ್ಯಾಜಿಸ್ಟ್ರೇಟ್ ತನ್ನ ಆದೇಶಕ್ಕೆ ಸಕಾರಣಗಳನ್ನು ದಾಖಲಿಸಬೇಕು. ಕೇವಲ ಆರೋಪಿ ಅಥವಾ ಚೆಕ್ ನೀಡಿದ ವ್ಯಕ್ತಿ ತಪ್ಪು ಒಪ್ಪಿಕೊಂಡಿಲ್ಲ ಎಂಬ ಏಕೈಕ ಕಾರಣಕ್ಕೆ ಪರಿಹಾರ ನೀಡುವಂತೆ ಆದೇಶ ಮಾಡಬಾರದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಸೆಕ್ಷನ್ 143 ರ ಎ ಅಡಿಯಲ್ಲಿ ಪರಿಹಾರ ನೀಡುವಂತೆ ಆದೇಶ ನೀಡಬಹುದು ಎಂದು ಹೇಳಲಾಗಿದೆಯೇ ಹೊರತು ಕಡ್ಡಾಯವಾಗಿ ನೀಡಲೇಬೇಕು ಎಂದು ಎಲ್ಲೂ ಹೇಳಿಲ್ಲ. ಹೀಗಾಗಿ ಮಧ್ಯಂತರ ಪರಿಹಾರ ನೀಡುವಂತೆ ಆದೇಶಿಸುವಾಗ ನ್ಯಾಯಾಲಯ ತನ್ನ ನ್ಯಾಯಿಕ ವಿವೇಚನಾಧಿಕಾರವನ್ನು ಬಳಸಬೇಕು. ಆರೋಪಿ ತಪ್ಪು ಒಪ್ಪಿಕೊಂಡಿಲ್ಲ ಎಂಬ ಒಂದೇ ಕಾರಣಕ್ಕೆ ಚೆಕ್ ಮೊತ್ತದ ಶೇಕಡ 20ರಷ್ಟನ್ನು ಮಧ್ಯಂತರ ಪರಿಹಾರವಾಗಿ ಪಿರಿಯಾದಿಗೆ ನೀಡುವಂತೆ ಆದೇಶ ಮಾಡಬಾರದು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ: ವಿಜಯಾ Vs ಶೇಖರಪ್ಪ
ಕರ್ನಾಟಕ ಹೈಕೋರ್ಟ್ Crl.Pet 100261/2022 Dated 17-02-2022