
ಹಿರಿಯ ನಾಗರಿಕರ ಕಾಯ್ದೆ: ಆಸ್ತಿ ವರ್ಗಾವಣೆ ರದ್ದು ಬಯಸಿ ಮಕ್ಕಳು ಅರ್ಜಿ ಸಲ್ಲಿಸಲಾಗದು- ಕರ್ನಾಟಕ ಹೈಕೋರ್ಟ್
ಹಿರಿಯ ನಾಗರಿಕರ ಕಾಯ್ದೆ: ಆಸ್ತಿ ವರ್ಗಾವಣೆ ರದ್ದು ಬಯಸಿ ಮಕ್ಕಳು ಅರ್ಜಿ ಸಲ್ಲಿಸಲಾಗದು- ಕರ್ನಾಟಕ ಹೈಕೋರ್ಟ್
ದಾನ ಪತ್ರದ ಮೂಲಕ ತಂದೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡಿದ್ದನ್ನು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣಾ ಮತ್ತು ಕ್ಷೇಮಾಭಿವೃದ್ಧಿ ಕಾಯಿದೆಯ ಸೆಕ್ಷನ್ 16 ಅಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಂದೆ ತನ್ನ ಸಹೋದರನಿಗೆ ಮಾಡಿದ್ದ ದಾನ ಪತ್ರವನ್ನು ರದ್ದುಪಡಿಸುವ ವಿಚಾರದಲ್ಲಿ ಮತ್ತೊಬ್ಬ ಪುತ್ರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ವಿಭಾಗಿಯ ನ್ಯಾಯ ಪೀಠ ಈ ಆದೇಶ ನೀಡಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ 2007ರ ಸೆಕ್ಷನ್ 16ರ ಅಡಿ ಆಸ್ತಿ ವರ್ಗಾವಣೆ ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಅಧಿಕಾರ ಕೇವಲ ಪೋಷಕರಿಗೆ ಮಾತ್ರ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪೋಷಕರು ಮಾಡಿದ್ದ ಆಸ್ತಿಯನ್ನು ವರ್ಗಾವಣೆ ರದ್ದು ಮಾಡುವಂತೆ ಮಕ್ಕಳು ಮನವಿ ಮಾಡಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಈ ಕುರಿತಂತೆ ವಿವಾದ ಇದ್ದಲ್ಲಿ ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ನಲ್ಲಿ ಅಸಲು ದಾವೆ (ಮೂಲ ದಾವೆ) ದಾಖಲಿಸಿ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಅಲ್ಲದೆ ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ರ ಪ್ರಕಾರ ಹಿರಿಯ ನಾಗರಿಕರು ಅಥವಾ ಪೋಷಕರು ತಮ್ಮ ಆಸ್ತಿಯನ್ನು ವರ್ಗಾವಣೆ ಮಾಡಿದ್ದರೆ, ಆಗ ಮಕ್ಕಳು ಮತ್ತು ತಮ್ಮ ದೈಹಿಕ ಅಗತ್ಯತೆಗಳು ಮತ್ತು ಮೂಲಸೌಕರ್ಯ ಒದಗಿಸಬೇಕೆಂದು ಶರತ್ತುಗಳನ್ನು ವಿಧಿಸಬಹುದು. ಆನಂತರ ಒಂದು ವೇಳೆ ಅವರು ಆ ಷರತ್ತುಗಳನ್ನು ಪೂರೈಸದೆ ಇದ್ದಲ್ಲಿ, ಉಪ ವಿಭಾಗಾಧಿಕಾರಿ ಮುಂದೆ ತಮ್ಮ ದಾನ ಪತ್ರ ರದ್ದು ಕೋರಿ ಅರ್ಜಿ ಸಲ್ಲಿಸಬಹುದು.
ಆ ಅರ್ಜಿಯ ಪ್ರಕಾರ, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 16ರ ಅಡಿ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರ ಅರ್ಜಿಗಳನ್ನು ಪರಿಗಣಿಸುವ ಸೂಕ್ತ ಆದೇಶವನ್ನು ಹೊರಡಿಸಬಹುದು. ಹೀಗೆ ಅರ್ಜಿ ಸಲ್ಲಿಸುವ ಅಧಿಕಾರ ಪೋಷಕರಿಗೆ ಹೊರತು ಮಕ್ಕಳಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.
ಘಟನೆಯ ವಿವರ:
ಬೆಂಗಳೂರಿನ ಕೃಷ್ಣ ಎಂಬವರು 2019ರಲ್ಲಿ ತಮ್ಮ ಆಸ್ತಿಯಲ್ಲಿ ಕೆಲ ಭಾಗವನ್ನು ತಮ್ಮ ಹಿರಿಯ ಪುತ್ರ ಅಯ್ಯಪ್ಪ ಅವರಿಗೆ ದಾನಪತ್ರದ ಮೂಲಕ ವರ್ಗಾವಣೆ ಮಾಡಿದ್ದರು. ಕೆಲ ವರ್ಷಗಳ ಬಳಿಕ ಹಿರಿಯ ನಾಗರಿಕರ ಕಾಯ್ದೆಯಡಿ ಉಪ ವಿಭಾಗಾಧಿಕಾರಿಗೆ ಮನವಿ ಮಾಡಿ ಅಕ್ರಮವಾಗಿ ತಮ್ಮಿಂದ ದಾನಪತ್ರ ಮಾಡಿಸಿಕೊಳ್ಳಲಾಗಿದೆ. ತಮ್ಮ ಹಿರಿಯ ಪುತ್ರ ನನಗೆ ಯಾವುದೇ ಸೌಕರ್ಯ ನೀಡುತ್ತಿಲ್ಲ. ಹಾಗಾಗಿ, ದಾನಪತ್ರವನ್ನು ರದ್ದುಮಾಡಬೇಕು ಎಂದು ಹೇಳಿಕೊಂಡಿದ್ದರು.
2023ರಲ್ಲಿ ಈ ಮನವಿಯನ್ನು ಪುರಸ್ಕರಿಸಿದ ಉಪ ವಿಭಾಗಾಧಿಕಾರಿಯವರು, ಈ ದಾನಪತ್ರವನ್ನು ರದ್ದುಮಾಡಿ ಆದೇಶ ಹೊರಡಿಸಿದ್ದರು.
ಈ ಆದೇಶ ಪ್ರಶ್ನಿಸಿ ಹಿರಿಯ ಪುತ್ರ ಅಯ್ಯಪ್ಪ ಅವರು ಜಿಲ್ಲಾಧಿಕಾರಿಯವರಿಗೆ ಮೇಲ್ಮನವಿ ಸಲ್ಲಿಸಿದ್ದರು. ಈ ನಡುವೆ ತಂದೆ ಕೃಷ್ಣ ಅವರು ತಮ್ಮ ವಿವಾದಿತ ಆಸ್ತಿಯನ್ನು ಎರಡನೇ ಪುತ್ರ ಲೋಕೇಶ್ ಅವರ ಹೆಸರಿಗೆ ವೀಲು ನಾಮೆ ಮಾಡಿದರು. ಮೊದಲನೇ ಪುತ್ರ ಸಲ್ಲಿಸಿದ್ದ ಮೇಲ್ಮನವಿ ಬಾಕಿ ಇದ್ದಾಗಲೇ ಕೃಷ್ಣ ಮೃತಪಟ್ಟರು.
ಹೀಗಾಗಿ, ಆಸ್ತಿಗೆ ಲೋಕೇಶ್ ಮತ್ತವರ ಸಹೋದರಿ ಉತ್ತರಾಧಿಕಾರಿಗಳಾಗಿದ್ದರು. ಇದರ ನಡುವೆ ಅಯ್ಯಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾಧಿಕಾರಿ ಪುರಸ್ಕರಿಸಿದ್ದರು. ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಲೋಕೇಶ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.