ಉದ್ದೇಶಪೂರ್ವಕವಾಗಿ ಮಹಿಳೆಯ ಮೈಮಾಟ ಬಣ್ಣಿಸುವುದು 'ಲೈಂಗಿಕ ಕಿರುಕುಳ': ಹೈಕೋರ್ಟ್ ಮಹತ್ವದ ತೀರ್ಪು
ಉದ್ದೇಶಪೂರ್ವಕವಾಗಿ ಮಹಿಳೆಯ ಮೈಮಾಟ ಬಣ್ಣಿಸುವುದು 'ಲೈಂಗಿಕ ಕಿರುಕುಳ': ಹೈಕೋರ್ಟ್ ಮಹತ್ವದ ತೀರ್ಪು
ಹೆಣ್ಣಿನ ದೇಹವನ್ನು ಅನುಚಿತವಾಗಿ ಬಣ್ಣಿಸುವುದು ಕೂಡ ಲೈಂಗಿಕ ಕಿರುಕುಳಕ್ಕೆ ಸಮ ಎಂದು ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ತಮ್ಮ ವಿರುದ್ಧ ದಾಖಲಾದ ಪ್ರಕರಣದ ರದ್ದು ಕೋರಿ ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯೊಬ್ಬರು, ತಮ್ಮ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ರದ್ದುಪಡಿಸುವಂತೆ ಅವರು ಅರ್ಜಿ ಸಲ್ಲಿಸಿದ್ದರು.
ಹೆಣ್ಣು ಮಕ್ಕಳ ದೇಹದ ಬಗ್ಗೆ ಉದ್ದೇಶಪೂರ್ವಕವಾಗಿ ಮತ್ತು ಅನುಚಿತವಾಗಿ ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ. ಇದರಿಂದ ಮಹಿಳೆಯ ಘನತೆಯ ಉಲ್ಲಂಘನೆಯಾಗಿದೆ. ಇದನ್ನು ಲೈಂಗಿಕ ಅಪರಾಧ ಎಂದೆ ಪರಿಗಣಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಸ್ತ್ರೀಯರ ಬಗ್ಗೆ ಮಾತನಾಡುವಾಗ ಪುರುಷರು ಎಚ್ಚರಿಕೆ ವಹಿಸಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಮಹಿಳೆಯ ಆರೋಪ
ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಮಾಜಿ ಉದ್ಯೋಗಿಯ ವಿರುದ್ಧ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.
ಆತ ಕರ್ತವ್ಯದಲ್ಲಿರುವಾಗ ತನಗೆ ಮಾನಸಿಕ ಕಿರುಕುಳ ನೀಡಿದ್ದಾನೆ. 2013ರಿಂದ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಕ್ಷೇಪಾರ್ಹ ಸಂದೇಶ ಹಾಗೂ ಕರೆಗಳನ್ನು ಮಾಡುತ್ತಿದ್ದಾನೆ. ನನ್ನ ದೇಹದ ಆಕಾರದ ಬಗ್ಗೆ ಅನುಚಿತವಾಗಿ ಹೇಳಿಕೆ ನೀಡಿದ್ದಾನೆ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದರು.
ಈ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಪ್ರಕರಣವನ್ನು ರದ್ದು ಮಾಡಬೇಕು ಎಂದು ಮನವಿ ಸಲ್ಲಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾನು ಮಹಿಳೆಯನ್ನು 'ಸುಂದರವಾಗಿ ಇದ್ದೀಯ' ಎಂದು ಹೊಗಳಿದ್ದೆ ಎಂಬುದಾಗಿ ಆರೋಪಿ ವಾದಿಸಿದ್ದರು. ಆಕೆಯ ಮೈಮಾಟವನ್ನು ಬಣ್ಣಿಸಿದ್ದು ತಪ್ಪೇ? ಎಂದು ಪ್ರಶ್ನಿಸಿರುವ ಅವರು, ಈ ಪ್ರಕರಣವನ್ನು ಲೈಂಗಿಕ ಕಿರುಕುಳ ಅಪರಾಧದ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಬಾರದು ಎಂದು ಅವರು ಹೇಳಿದ್ದರು. ಹಾಗೂ ತನ್ನ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಆದರೆ ನ್ಯಾಯಾಲಯ ಆರೋಪಿಯ ಮನವಿಯನ್ನು ನಿರಾಕರಿಸಿತು. ಹೆಣ್ಣಿನ ದೇಹ ಸೌಂದರ್ಯವನ್ನು ಉದ್ದೇಶಪೂರ್ವಕವಾಗಿ ಬಣ್ಣಿಸುವುದು ಅನುಚಿತ ಇದು ಲೈಂಗಿಕ ಕಿರುಕುಳಕ್ಕೆ ತಮ್ಮ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.